
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿಯಿಂದ ತಮ್ಮ ಮನೆಗಳ ಇ-ಸ್ವತ್ತು(ಖಾತಾ) ಉತಾರೆಗಾಗಿ ಸಾರ್ವಜನಿಕರು ಅಲೆದಾಟದಲ್ಲಿರುವುದು.
ದೇವರಹಿಪ್ಪರಗಿ: ಪಟ್ಟಣ ವ್ಯಾಪ್ತಿಯಲ್ಲಿನ ವಿವಿಧ ವಾರ್ಡುಗಳ ಮನೆಗಳ ದಾಖಲೆಯ ಲಭ್ಯತೆಯ ಕೊರತೆಯಿಂದ ಇ-ಸ್ವತ್ತು(ಖಾತಾ) ಮೂಲಕ ಉತಾರೆ ದೊರಕದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬಳಲುವಂತಾಗಿದೆ.
ಪಟ್ಟಣದ 5, 12, 14, 15, 16, 17ನೇ ವಾರ್ಡುಗಳಲ್ಲಿ ಹಲವು ವರ್ಷಗಳಿಂದ ಸ್ವಂತಮನೆ ಹೊಂದಿ ಈಗ ಅವುಗಳಿಗೆ ಸಂಬಂಧಿತ ಉತಾರೆ ಪಡೆಯಲು ಸಾಧ್ಯವಾಗದೇ, ಖಾಸಗಿ ಬ್ಯಾಂಕ್, ಸಹಕಾರಿ ಸಂಘಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ.
ಪಟ್ಟಣದಲ್ಲಿನ ಒಟ್ಟು 15414 ಮನೆಗಳಲ್ಲಿ ಈಗ 4859 ಎ-ಖಾತಾ, 789 ಬಿ-ಖಾತಾದಡಿ ಉತಾರೆ ಪಡೆದಿವೆ. ಜೊತೆಗೆ ಈಗ 60ಮನೆಗಳ ಅರ್ಜಿ ಇವೆ. ಇನ್ನುಳಿದಂತೆ 10 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮನೆಗಳ ಇ-ಖಾತಾ ಆಗಬೇಕಾಗಿದೆ. ಇವುಗಳಲ್ಲಿ ಮಧ್ಯಮ ಹಾಗೂ ಬಡ ಕುಟುಂಬಗಳೇ ಅಧಿಕವಾಗಿರುವುದು ವಿಶೇಷ.
ಈ ಬಗ್ಗೆ ಜೆಡಿಎಸ್ ಯುವಧುರೀಣ ಮುನೀರ್ ಅಹ್ಮದ್ ಮಳಖೇಡ ಮಾತನಾಡಿ, ರಾಜ್ಯಸರ್ಕಾರ ಆಸ್ತಿಯ ಕಾನೂನುಬದ್ಧತೆ, ಮಾಲೀಕತ್ವ ಹಾಗೂ ತೆರಿಗೆ ಪಾವತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಎ-ಖಾತಾ, ಬಿ-ಖಾತಾ ಮತ್ತು ಇ-ಖಾತಾ ಎಂಬ ಮೂರು ಪ್ರಮುಖ ದಾಖಲೆ ಪ್ರಕಾರ ಮಾಡಿದ್ದು ಒಳ್ಳೆಯ ಬೆಳವಣಿಗೆ. ಇದರಿಂದ ಎನ್.ಎ ಮಾಡಿದಂತ ಕಾನೂನುಬದ್ಧ ನೋಂದಾಯಿತ ಆಸ್ತಿಗೆ ಎ-ಖಾತಾ ಹಾಗೂ 'ಗುಂಟಾ'ದಂತ ಅರೆಕಾನೂನು ಬದ್ಧ ಆಸ್ತಿಗೆ ಬಿ-ಖಾತಾದಡಿ ಉತಾರೆ ಪಡೆಯಲು ಸಹಕಾರಿಯಾಗಿದೆ. ಆದರೆ, ಇವೆರಡು ಸಾಲಿಗೆ ಸೇರದೇ ಸಾಕಷ್ಟು ವರ್ಷಗಳಿಂದ ಒಂದೇ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ಕೈಬರಹದ ಉತಾರೆ ಮೂಲಕ ತಮ್ಮ ವ್ಯವಹಾರ ನಡೆಸಿದ ಬಹುತೇಕ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳು ಈಗ ದಾಖಲೆಗಳ ಕೊರತೆಯ ಕಾರಣ ಇ-ಖಾತಾದಡಿ ಉತಾರೆ ಪಡೆಯಲು ಹರಸಾಹಸ ಪಡುವಂತಾಗಿದೆ ಎನ್ನುತ್ತಾರೆ.
’ಇ-ಸ್ವತ್ತು ಮೂಲಕ ನಾವು ಉತಾರೆ ಪಡೆಯಬೇಕೆಂದರೆ ನಮ್ಮ ಮನೆಗಳಿಗೆ ಸಂಬಂಧಿತ ಹಿಂದಿನ ದಾಖಲೆಗಳೇ ಇಲ್ಲ. ಅವುಗಳಿಲ್ಲದೇ ನಾವು ಸಹ ಏನೂ ಮಾಡುವಂತಿಲ್ಲ ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ಹೇಳುತ್ತಾರೆ. ಈಗ ನಾವು ಏನೂ ಮಾಡಬೇಕು ಎಂಬುವುದೇ ತಿಳಿಯದಾಗಿದೆ ಎಂದು ತಮ್ಮ ಅಸಹಾಯಕತೆ ಬಿಚ್ಚಿಡುತ್ತಾರೆ’ 12ನೇವಾರ್ಡಿನ ರಮೇಶ ಮಣೂರ, 16ನೇ ವಾರ್ಡಿನ ಸಲೀಮ್ ಮನಿಯಾರ.
’ಸಾರ್ವಜನಿಕರು ಪಂಚಾಯಿತಿಗೆ ಭೇಟಿ ನೀಡದೇ ಇ-ಸ್ವತ್ತು ತಂತ್ರಾಂಶದ ಮೂಲಕ ತಮ್ಮ ಆಸ್ತಿಯ ನಮೂನೆಗಳನ್ನು ಸಲ್ಲಿಸಲು ಸರ್ಕಾರ ಈಗ ಅವಕಾಶ ನೀಡಿದೆ. ಆದರೆ, ಗ್ರಾಮೀಣ ಜನತೆಗೆ ಇದು ತಿಳಿಯಲಾರದು. ಆದ್ದರಿಂದ ಸರ್ಕಾರ ಗ್ರಾಮೀಣ ಪ್ರದೇಶದ ಹಳೆಯ ಮನೆಗಳ ದಾಖಲೆಗಳಿಗೆ ರಿಯಾಯತಿ ನೀಡಿ ಅವರ ಆಸ್ತಿಗಳಿಗೆ ಉತಾರೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಹಸನ್ ನಧಾಫ್, ಚಿದಂಬರ್ ಕುಲಕರ್ಣಿ(ಹಂಚಲಿ),ಬಸವರಾಜ ಮಶಾನವರ, ಮುಸ್ತಫಾ ಮುಲ್ಲಾ, ಬಸವರಾಜ ಅತನೂರ, ಗೊಲ್ಲಾಳ ಸಣ್ಣಕ್ಕಿ ಆಗ್ರಹಿಸುತ್ತಾರೆ.
ಪಟ್ಟಣದ ವಿವಿಧ ವಾರ್ಡುಗಳಲ್ಲಿನ ಮನೆಗಳ ಇ-ಸ್ವತ್ತು(ಖಾತಾ) ಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಅಪ್ರೋಜ್ ಅಹ್ಮದ್ ಪಟೇಲ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ದೇವರಹಿಪ್ಪರಗಿ