ADVERTISEMENT

ಬಿಜೆಪಿಯಿಂದ ಮುದ್ದೇಬಿಹಾಳ ಅಭಿವೃದ್ಧಿ: ಶೆಟ್ಟರ್‌

ತಾಳಿಕೋಟೆ ಪುರಸಭೆ ಕಟ್ಟಡ ಉದ್ಘಾಟನೆ, ಬಸವೇಶ್ವರ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 16:22 IST
Last Updated 11 ಮಾರ್ಚ್ 2023, 16:22 IST
ತಾಳಿಕೋಟೆ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯನ್ನು ನೀರಾವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು
ತಾಳಿಕೋಟೆ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯನ್ನು ನೀರಾವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು   

ತಾಳಿಕೋಟೆ: ಮುದ್ದೇಬಿಹಾಳದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಆಗಿದ್ದು, ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಈ ಭಾಗ ನೀರಾವರಿ ಆಗಲು ಬಿಜೆಪಿ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪುರಸಭೆಯ ನೂತನ ಕಟ್ಟಡ ಉದ್ಘಾಟಿಸಿ, ಬಸವೇಶ್ವರ ಮೂರ್ತಿ ಅನಾವರಣ ಮಾಡಿ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟದ ಬಗ್ಗೆ ಅವರು ಗುಡುಗುವಾಗ ಇಡೀ ಕರ್ನಾಟಕ ನಡಗುತ್ತದೆ. ಸಮಸ್ಯೆಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವವರು ನಡಹಳ್ಳಿಯವರಾಗಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಜಲಸಂಪನ್ಮೂ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಉಗ್ರವಾದಿಗಳಿಗೆ ಕಾಂಗ್ರೆಸ್‌ನವರು ಬೆಂಬಲಿಸುತ್ತಿದ್ದರು. ಉಗ್ರವಾದದಿಂದಲೇ ಇಂದು ಕಾಂಗ್ರೇಸ್ ನಾಶವಾಗಿದೆ. ಮೋದಿಜಿಯಿಂದ ದೇಶ ಜಗತ್ತಿನ ಐದನೇ ಸ್ಥಾನಕ್ಕೆ ಬಂದಿದೆ. ಭಾರತ ವಿಶ್ವ ನಾಯಕತ್ವ ಪಡೆಯಲಿದೆ ಎಂದರು.

ನಡಹಳ್ಳಿಯವರು ಕ್ಷೇತ್ರಕ್ಕೆ ₹3600 ಕೋಟಿ ಅನುದಾನ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಇಷ್ಟು ಅನುದಾನ ತಂದಿದ್ದರೆ ಅವರನ್ನು ನಾವೇ ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದೆವು, ನಡಹಳ್ಳಿಯವರಿಂದ ಮಾತ್ರ ಸಾಧನೆಯಾಗಿದೆ. ಆದ್ದರಿಂದ ಇಲ್ಲಿ ಮತ್ತೊಮ್ಮೆ ನಡಹಳ್ಳಿ ಗೆಲ್ಲಿಸಿ, ಕಮಲವನ್ನು ಅರಳಿಸಿ ಎಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಸಾಧನೆ ಹಾಗೂ ಅಭಿಮಾನದ ಆಧಾರದಲ್ಲಿ ಕಾಂಗ್ರೆಸ್‌ ಎಂದೂ ಗೆದ್ದಿಲ್ಲ. ಮತಕ್ಷೆತ್ರದಲ್ಲಿ ಹಿಂದೆಂದೂ ಮಾಡದ ಅಭಿವೃದ್ದಿ ಕಾರ್ಯಗಳನ್ನು ನಾನು ಮಾಡಿದ್ದೇನೆ. ಸಾಧನೆಯ ಪುಸ್ತಕವನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದ್ದೇನೆ ಎಂದರು.

ಬಸರಕೋಡದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಸಾಕಷ್ಟು ನೀರಾವರಿ ಆಗಿದೆ. ಮತ್ತೊಮ್ಮೆ ಆಶೀರ್ವಾದ ಮಾಡಿದರೆ ಹೆಚ್ಚಿನ ಅಭಿವೃದ್ದಿ ಮಾಡಿ ತೋರಿಸುತ್ತೇನೆ. ನಾನು ಅಬಿವೃದ್ದಿ ಆಧಾರದಲ್ಲಿ ಗೆಲ್ಲಲಿದ್ದೇನೆ ಎಂದರು.

ಬೃಹತ್ ಕೈಗಾರಿಕೆ ಸಚಿವ ಮುರಗೇಶ ನೀರಾಣಿ, ಮಾತನಾಡಿ, ನಡಹಳ್ಳಿಯವರು ತಾಲ್ಲೂಕಿಗೆ ಅವರ ಪುತ್ರ ಭರತ ನಡಹಳ್ಳಿ ಮೂಲಕ ಉದ್ಯೋಗ ತರಲಿದ್ದಾರೆ. ನೀವೆಲ್ಲ ನೌಕರಸ್ಥರಾಗದೇ, ಉದ್ಯಮಿಗಳಾಗಿ. ಪೈಸೆ ಖರ್ಚಿಲ್ಲದೇ ಸಬ್ಸಿಡಿ, ಬ್ಯಾಂಕ್ ಸಾಲ ಪಡೆದು ಬೆಳೆಯಿರಿ ಎಂದರು.

ಎಂ.ಎಸ್.ಪಾಟೀಲ ನಾಲತವಾಡ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಬಸವರಾಜ ಬಿರಾದಾರ, ಎಂಡಿ.ಕುಂಬಾರ ಮಲ್ಲಿಕಾರ್ಜುನ ಜೋಗೂರ, ಸಂಗಮೇಶ ಇಂಗಳಗಿ, ಪ್ರಭುಲಿಂಗ ಕಡಿ, ಸೋಮನಗೌಡ ಬಿರಾದಾರ, ಕಾಶಿಬಾಯಿ ರಾಂಪೂರೆ, ಮುತ್ತಣ್ಣ ಹುಗ್ಗಿ, ಡಿ.ಕೆ.ಪಾಟೀಲ, ಜಗದೀಶ ಪಂಪಣ್ಣವರ, ಎಚ್.ಎಸ್.ಪಾಟೀಲ, ವಾಸುದೇವ ಹೆಬಸೂರ, ಜೈಸಿಂಗ ಮೂಲಿಮನಿ, ಶಂಕ್ರಗೌಡ ಹಿಪ್ಪರಗಿ, ಕಾಶಿನಾಥ ಮುರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.