ADVERTISEMENT

ಹೋರಾಟಕ್ಕಿಳಿಯದೇ, ಅಭಿವೃದ್ಧಿ ಕಾರ್ಯ ಮಾಡುತ್ತಿರುವೆ: ಶಾಸಕ ರಾಜುಗೌಡ ಪಾಟೀಲ

ಕಣಕಾಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:58 IST
Last Updated 8 ಆಗಸ್ಟ್ 2025, 5:58 IST
ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಭೂವಿಪೂಜೆ ಹಾಗೂ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು 
ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಭೂವಿಪೂಜೆ ಹಾಗೂ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು    

ಬಸವನಬಾಗೇವಾಡಿ: ನಾನು ವಿಪಕ್ಷದ ಶಾಸಕನಾಗಿ ಹೋರಾಟ ಮಾಡಿ ಹಿರೋ ಆಗಲು ಹೋದರೆ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿ ರೈತರಿಗೆ ತೊಂದರೆಯಾಗುತ್ತದೆ. ಹಾಗಾಗಿ ಯಾವುದೇ ಹೋರಾಟಕ್ಕಿಳಿಯದೇ, ಓಡಾಟ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಕಣಕಾಲ‌ದಲ್ಲಿ ಬುಧವಾರ ಕಣಕಾಲ ಮತ್ತು ರೆಬಿನಾಳ ಗ್ರಾಮಗಳ 2x10 ಎಂವಿಎ, 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಉದ್ಘಾಟನೆ, ಯುಕೆಪಿ ಮುಳವಾಡ ಏತ ನೀರಾವರಿ ಯೋಜನೆ 3ನೇ ಹಂತದ ಸಂಕನಾಳ ಶಾಖಾ ವಿತರಣಾ ಕಾಲುವೆ 1-8 ರ ಲ್ಯಾಟರ್ ಗಳ ಪ್ಯಾಕೇಜ್ ಕಾಮಗಾರಿಗೆ ಭೂಮಿಪೂಜೆ ಮತ್ತು ಅಂಬಳನೂರ, ನರಸಲಗಿ ಹಾಗೂ ಉತ್ನಾಳ ತಾಂಡಾಗಳ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನನ್ನ ಮನವಿಗೆ ಸ್ಪಂದಿಸಿದ ನೀರಾವರಿ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಹಕಾರದಿಂದ ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ಕಾಲುವೆ ಕಾಮಗಾರಿ ಪೂರ್ಣಗೊಂಡಿವೆ‌. ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಕಣಕಾಲ ಮತ್ತು ರೆಬಿನಾಳ ಗ್ರಾಮಗಳಲ್ಲಿ 2x10 ಎಂವಿಎ, 110/11 ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಯಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ‌ ರೈತರಿಗೆ‌ ಹಗಲಿನಲ್ಲಿ‌ 7 ತಾಸು ವಿದ್ಯುತ್ ಪೂರೈಕೆಯಾಗುವುದಲ್ಲದೇ ಈ ಹಿಂದೆ ಅವಲಂಭಿತವಾಗಿದ್ದ ಬಸವನಬಾಗೇವಾಡಿ ಹಾಗೂ ಹೂವಿನ ಹಿಪ್ಪರಗಿ ಇತರೆ ವಿತರಣಾ ಕೇಂದ್ರಗಳ ವಿದ್ಯುತ್ ಭಾರ ಕಡಿಮೆಯಾಗಿ ಆ ಭಾಗದವರಿಗೂ ಉತ್ತಮ ವಿದ್ಯುತ್ ಪೂರೈಕೆಯಾಗಲಿದೆ ಎಂದರು.

ADVERTISEMENT

ಸಂಕನಾಳ ಶಾಖಾ ಕಾಲುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದ್ದು, ಕ್ಷೇತ್ರದ ಕಲ್ಲೊಡಗಿ, ಕಾನಾಳ, ಕಣಕಾಲ, ಹೂವಿನಹಿಪ್ಪರಗಿ, ಹುಣಶ್ಯಾಳ, ಸಂಕನಾಳ, ಕರಭಂಟನಾಳ, ಅಗಸಬಾಳ ಹೀಗೆ ಹಲವು ಗ್ರಾಮಗಳಿಗೆ, ಕೆರೆ ತುಂಬುವ ಯೋಜನೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಈಗಾಗಲೇ ಅಂಬಳನೂರ, ನರಸಲಗಿ ಹಾಗೂ ಉತ್ನಾಳ ತಾಂಡಾಗಳ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಇನ್ನುಳಿದ‌ ಕಂದಾಯ ಗ್ರಾಮಗಳ‌ ಹಕ್ಕುಪತ್ರ ಬರುವ ಡಿಸೆಂಬರ್ ಒಳಗಾಗಿ ತಹಶೀಲ್ದಾರ್‌ ನೀಡುವ ಕೆಲಸ ಮಾಡುತ್ತಾರೆ. ನನ್ನ ಮತಕ್ಷೇತ್ರ 4 ತಾಲ್ಲೂಕುಗಳ ಹಳ್ಳಿಗಳು ಬರುವ 31 ತಾಂಡಾಗಳಿರುವ ದೊಡ್ಡ ಕ್ಷೇತ್ರ. ದೇವರ ಹಿಪ್ಪರಗಿಯಲ್ಲಿ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ತಹಶೀಲ್ದಾರ ವೈ.ಎಸ್.ಸೋಮನಕಟ್ಟಿ, ಕೆಪಿಟಿಸಿಎಲ್ ಬಾಗಲಕೋಟೆ ಪ್ರಸರಣ ವಲಯದ ಅಧೀಕ್ಷಕ ಅಭಿಯಂತರ ರಮೇಶ ಪವಾರ, ಕೆಬಿಜೆಎನ್ಎಲ್ ಇಇ ಅಶೋಕ ರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ, ಕಾಮಗಾರಿಗಳ ಪಕ್ಷಿನೋಟ ನೀಡಿದರು. ನರಸಲಗಿ ಗ್ರಾಮದ ಹಿರಿಯರಾದ ಬಸವರಾಜ ಚಂದಪ್ಪ ನಾಯಕ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳು, ಬೇಡಿಕೆಗಳನ್ನು ಶಾಸಕರು, ಅಧಿಕಾರಗಳಿಗೆ ವಿವರಿಸಿ, ಸ್ಪಂದಿಸುವಂತೆ ಮನವಿ ಮಾಡಿಕೊಂಡರು. ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಶಾಸಕರು ಹಕ್ಕುಪತ್ರಗಳನ್ನು ವಿತರಿಸಿದರು.

ಘನಮಠೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಡಿಎಸ್ ಮುಖಂಡರಾದ ಗುರನಗೌಡ ಪಾಟೀಲ, ಶಾಂತಗೌಡ ನಾಡಗೌಡ, ನಾಗರಾಜ ಓದಿ, ಕೆಪಿಟಿಸಿಎಲ್ ಅಧಿಕಾರಿಗಳಾದ ಜಗದೀಶ ಜಾಧವ, ವಾಯಿದ್ ಜಾಗೀರದಾರ, ಸಿದ್ದರಾಮ ಬಿರಾದಾರ, ಕೆಬಿಜೆಎನ್ಎಲ್ ಎಇಇ ಜಗದೀಶ ಹೊನ್ನಕಸ್ತೂರಿ, ಕಂದಾಯ ನಿರೀಕ್ಷಕ ಜಗದೀಶ ಹಾರಿವಾಳ, ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಹಳ್ಳೂರ, ಉಮೇಶ ವಾಲಿಕಾರ, ಕಣಕಾಲ ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಕುಂಬಾರ, ನರಸಲಗಿ ಗ್ರಾ.ಪಂ ಅಧ್ಯಕ್ಷ ಅವಪ್ಪಗೌಡ ಬಿರಾದಾರ, ಗುತ್ತಿಗೆದಾರ ಆರ್.ಡಿ.ದೇಸಾಯಿ‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.