ADVERTISEMENT

ಸಿ.ಎಂ ಶಿಗ್ಗಾವಿ ನಿವಾಸದ ಎದುರು ಧರಣಿ: ಸೆ. 19ಕ್ಕೆ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 13:08 IST
Last Updated 15 ಸೆಪ್ಟೆಂಬರ್ 2022, 13:08 IST
ಶಂಕರಗೌಡ ಎಸ್.ಬಿರಾದಾರ
ಶಂಕರಗೌಡ ಎಸ್.ಬಿರಾದಾರ   

ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಸೆ. 19ರಂದು ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಆಗ್ರಹಿಸಿ ಇದುವರೆಗೆಹಲವು ರೀತಿಯ ಹೋರಾಟಗಳನ್ನು ಮಾಡಿದರು ಕೂಡ ರಾಜ್ಯ ಸರ್ಕಾರ ಇಲ್ಲಿಯವರೆಗೂ ಮೀಸಲಾತಿ ಕೊಡದೇ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಈಗ ನಡೆದಿರುವ ಅಧಿವೇಶನದಲ್ಲಿ ನಮ್ಮ ಸಮಾಜದ ಎಲ್ಲ ಶಾಸಕರು ಪಕ್ಷಾತೀತವಾಗಿ ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.

ADVERTISEMENT

ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಅವರ ನಿವಾಸದ ಎದುರು ಹಮ್ಮಿಕೊಂಡಿರುವ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು. ವಿಜಯಪುರ ಜಿಲ್ಲೆಯಿಂದ ಸುಮಾರು 2000 ಜನ ಭಾಗವಹಿಸುವರು ಎಂದು ಹೇಳಿದರು.

ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ,‌ ಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿಯವರು ಸಮಾಜಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.ಮಾತು ತಪ್ಪಿದರೆ ಅದರ ಫಲ ಉಣ್ಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ವಿಜಯಪುರ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣಿ, ಪ್ರಶಾಂತ್ ಮುಂಜಾನೆ, ದಯಾನಂದ ಜಾಲಗೇರಿ, ಸದಾಶಿವ ಅಳ್ಳಿಗಿಡದ, ಸಿದ್ದು ಹಳ್ಳೂರ, ಎಂ.ಎಂ.ಹಂಗರಗಿ, ಸಂಜು ಬಿರಾದಾರ, ಅಂಬರೀಶ್ ಗೂಳಿ, ಕಾಮರಾಜ ಬಿರಾದಾರ, ,ವಿಠಲ ವಡಗಾವ, ಪ್ರವೀಣ ಪಾಟೀಲ, ಶೋಭಾ ಬಿರಾದಾರಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಯತ್ನಾಳಗೆ ಸಚಿವ ಸ್ಥಾನ ನೀಡಿ’

ವಿಜಯಪುರ: ಮುಖ್ಯಮಂತ್ರಿಯವರು ಕೂಡಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನಾಗಿ ಸಚಿವರನ್ನಾಗಿ ಮಾಡಿ ವಿಜಯಪುರ ಜಿಲ್ಲಾ ಉಸ್ತುವಾರಿ ಕೊಡಬೇಕು ಎಂದುಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಒತ್ತಾಯಿಸಿದರು.

ಕಿಡಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇತ್ತೀಚಿಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬಾರದು ಎಂದು ಹೇಳಿರುವುದು ಖಂಡನೀಯ. ಸ್ವತಃ ಈಶ್ವರಪ್ಪನವರೇ ಕುರುಬ ಸಮಾಜವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ಪಾದಯಾತ್ರೆ ಹೋರಾಟ ಮಾಡಿ ಇದೀಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಡಿ ಎಂದು ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ ಅವರಿಗೆ ಸಚಿವ ಸ್ಥಾನದಿಂದ ವಜಾ ಮಾಡಿರುವುದರಿಂದ ಬುದ್ಧಿ ಭ್ರಮಣೆಯಾಗಿದೆ ಎಂದು ಆರೋಪಿಸಿದರು.

ಈಶ್ವರಪ್ಪ ಅವರು ಕುರುಬರಿಗೆ ಮೀಸಲಾತಿ ಕೇಳಿ ನಡೆಸಿದ ಹೋರಾಟಕ್ಕೆ ಪಂಚಮಸಾಲಿ ಸಮಾಜದ ಮುಖಂಡರು ಬೆಂಬಲಿಸಿದ್ದೆವು. ಆದರೆ, ನಾವು ಈಗ ಮೀಸಲಾತಿ ಕೇಳಿದರೆ ಕೊಡಬೇಡ ಅಂತ ಹೇಳಲು ಇವರು ಯಾರು ಎಂದು ಪ್ರಶ್ನಿಸಿದರು.

ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಷಡ್ಯಂತರ ರೂಪಿಸಲಾಗಿದೆ. ಸುಳ್ಳು ಲೈಂಗಿಕ ಆರೋಪಗಳನ್ನು ಮಾಡಲಾಗುತ್ತಿದೆ. ಸಮಾಜ ಈ ಕೃತ್ಯವನ್ನು ಖಂಡಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.