
ಚಡಚಣ: ಕರ್ನಾಟಕ - ಮಹಾರಾಷ್ಟ್ರ ರಾಜ್ಯಗಳ ಗಡಿ ಅಂಚಿನಲ್ಲಿರುವ, ಭೀಮಾ ನದಿಯ ಬಲದಂಡೆಯಲ್ಲಿರುವ ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ದಿ ಪಡೆದ ಧೂಳಖೇಡ ಗ್ರಾಮಕ್ಕೆ ಬೇಕಿದೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
ಐತಿಹಾಸಿಕ ಪ್ರಸಿದ್ಧಿ ಹೊಂದಿದ ಶಂಕರಲಿಂಗ ದೇವಾಲಯದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈ ದೇವಾಲಯಕ್ಕೆ ಹೋಗಲು ಉತ್ತಮವಾದ ಡಾಂಬರ್ ರಸ್ತೆಯೂ ಇಲ್ಲದೇ ಸುತ್ತಲು ದೂಳು ಮಣ್ಣು ಆವರಿಸಿಕೊಂಡಿದೆ.
ಈ ದೇವಾಲಯದ ಸುತ್ತಲು ಇದ್ದ ಹಳೆ ಧೂಳಖೇಡನ್ನು ಸ್ಥಳಾಂತರಿಸಿ, ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕ ಅಭಿವೃದ್ಧಿ ಪಡಿಸಲಾಗಿದೆ. ಸ್ಥಳಾಂತರಗೊಂಡು ದಶಕಗಳು ಕಳೆದರೂ ಈ ಗ್ರಾಮವು ಹಲವು ಮೂಲಸೌಕರ್ಯಗಳಿಂದ ವಂಚಿತಗೊಂಡಿದೆ.
ಗ್ರಾಮದಲ್ಲಿ ಉತ್ತಮ ಹಾಗೂ ವಿಶಾಲವಾದ ರಸ್ತೆಗಳಿದ್ದರೂ ಚರಂಡಿ ವ್ಯವಸ್ಥೆ ಇಲ್ಲ. ಈ ಗ್ರಾಮಕ್ಕೆ ಸುತ್ತಲಿನ ಸುಮಾರು 10 ಗ್ರಾಮಗಳ ಜನರು ನಿತ್ಯ ಆಗಮಿಸಿ, ವಿಜಯಪುರ-ಸೋಲಾಪುರದಂತ ಹೋಗುವದು ಅನಿವಾರ್ಯ. ಆದರೆ, ಈ ಗ್ರಾಮಕ್ಕೆ ಒಂದು ಉತ್ತಮವಾದ ಬಸ್ ನಿಲ್ದಾಣವಿಲ್ಲ. ಜನರು ಮಳೆ, ಬಿಸಿಲು ಎನ್ನದೇ ರಸ್ತೆಯ ಪಕ್ಕದಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕು. ವಿದ್ಯಾರ್ಥಿಗಳು, ಮಹಿಳೆಯರಿಗಾಗಿ ಕುಡಿಯುವನೀರು, ಶೌಚಾಲಯವಾಗಲಿ ಇಲ್ಲ.
ಗ್ರಾಮದ ಬಹುತೇಕ ಜನರಿಗೆ ಬಯಲು ಶೌಚಾಲಯವೇ ಗತಿ, ಗಡಿ ಅಂಚಿನ ಪ್ರಮುಖ ವ್ಯಾಪಾರಿ ಕೇಂದ್ರವಾದ ಈ ಗ್ರಾಮಕ್ಕೆ ನಿತ್ಯ ಹೊರ ರಾಜ್ಯಗಳಿಂದ ಸಹಸ್ರಾರು ವಾಹನಗಳು ಆಗಮಿಸುತ್ತವೆ. ಆದರೆ, ಗಡಿ ಅಂಚಿನಲ್ಲಿ ಒಂದು ಪೊಲೀಸ್ ಉಪ ಠಾಣೆಯಾಗಲಿ, ಚೆಕ್ ಪೋಸ್ಟ್ ಆಗಲಿ, ಸಿ.ಸಿ ಕ್ಯಾಮೆರಾಗಳ ವ್ಯವಸ್ಥೆಯಾಗಲಿ ಇಲ್ಲ. ಸೂಕ್ತ ಭದ್ರತೆ ಇಲ್ಲದಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಶುದ್ಧ ನೀರಿನ ಘಟಕಗಳ ಸ್ಥಾಪನೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವಾರು ಸೌಕರ್ಯಗಳ ಅವಶಕ್ಯಕತೆ ಇದ್ದು, ಇನ್ನಾದರೂ ಸೌಲಭ್ಯ ವಂಚಿತ ಈ ಗ್ರಾಮಕ್ಕೆ ಕಾಯಕಲ್ಪ ಒದಗಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಗಡಿ ಭಾಗದಲ್ಲಿ ಕೊಲೆ ದರೋಡೆಗಳು ಹೆಚ್ಚಾಗಿ ನಡೆಯುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಗಡಿಚೆಕ್ ಪೋಸ್ಟ್ ಸ್ಥಾಪಿಸಿ ಕಾಯಂ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು.ರಮೇಶ ಬೆಳ್ಳೆನವರ ಗ್ರಾಮಸ್ಥ
ಶಂಕರಲಿಂಗ ದೇವಾಲಯ ಕಂದಾಯ ಇಲಾಖೆಯ ಸುಪರ್ದಿಯಲ್ಲಿದೆ. ವರ್ಷವಿಡಿ ಆಗಮಿಸುವ ಭಕ್ತರಿಗೆ ಮೂಲ ಸೌಲಭ್ಯ ಸಭಾ ಭವನ ಕುಡಯುವ ನೀರಿನ ವ್ಯವಸ್ಥೆ ಬಿದ್ದ ಗೋಡೆಗಳ ಮರು ನಿರ್ಮಾಣ ಮಾಡಬೇಕುಶಿವಬಾಳ ಗೋಲಿ, ನಿವೃತ್ತ ಶಿಕ್ಷಕ
ಪುರಾತನ ಶಂಕರಲಿಂಗ ದೇವಾಲಯ
ಭೀಮಾ ನದಿ ದಂಡೆಯಲ್ಲಿರುವ ಶಂಕರಲಿಂಗ ದೇವಾಲಯವನ್ನು ದಕ್ಷಿಣ ಗಂಗೆ ಭೂ ಕೈಲಾಸ ಮುಕ್ತಿ ಮಂದಿರವೆಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖವಾಗಿವೆ. ಪುರಾತನ ಶಂಕರಲಿಂಗ ದೇವಾಲಯವು ಚಾಲುಕ್ಯ ಕಾಲದಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಭೀಮಾ ನದಿಯು ದಕ್ಷಿಣ ಮುಖವಾಗಿ ಹರಿಯುತ್ತದೆ. ಈ ನದಿಯಲ್ಲಿಯೇ ಸ್ವಯಂಭೂ ಶಂಕರಲಿಂಗ ವಿಗ್ರಹವಿದೆ. ಈ ವಿಗ್ರಹದ ಮೇಲೆ ಯುಗಾದಿ ಹಬ್ಬದಂದು ಸೂರ್ಯನ ಕಿರಣಗಳು ಮೊದಲು ಈ ಲಿಂಗದ ಮೇಲೆ ಬಿಳುತ್ತಿರುವುದು ವಿಶೇಷ. ಎಂಟನೇ ಶತಮಾನದಲ್ಲಿ ಶೃಂಗೇರಿಯಿಂದ ಉತ್ತರ ಭಾರತದ ಕಡೆಗೆ ಧರ್ಮ ಯಾತ್ರೆಗೆ ಹೊರಟ ಸಮಯದಲ್ಲಿ ಶಂಕರಾಚಾರ್ಯರು ಭೇಟಿ ನೀಡಿ ಕ್ಷೇತ್ರದ ಮಹತ್ವ ತಿಳಿದಿಕೊಂಡಿದ್ದರು ಎನ್ನಲಾಗಿದೆ. ಹಲವಾರು ಶಾಸನಗಳು ಪ್ರಾಚೀನ ವಸ್ತುಗಳು ಈ ದೇವಾಲಯದಲ್ಲಿ ಪತ್ತೆಯಾಗಿವೆ. ಈಗ ಮುಜರಾಯಿ ಇಲಾಖೆಗೆ ಈ ದೇವಾಲಯ ಒಳಪಟ್ಟಿದೆ.