ADVERTISEMENT

ಆರ್‌ಎಸ್‌ಎಸ್ ಮುಸ್ಲಿಮರ ವಿರೋಧಿಯಲ್ಲ: ದಿಲೀಪ್ ವರ್ಣೇಕರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:06 IST
Last Updated 29 ಅಕ್ಟೋಬರ್ 2025, 6:06 IST
ನಿಡಗುಂದಿ ತಾಲ್ಲೂಕು ಗೊಳಸಂಗಿಯಲ್ಲಿ ಆರ್‌ಎಸ್ಎಸ್ ಪಥಸಂಚಲನ ಜರುಗಿತು
ನಿಡಗುಂದಿ ತಾಲ್ಲೂಕು ಗೊಳಸಂಗಿಯಲ್ಲಿ ಆರ್‌ಎಸ್ಎಸ್ ಪಥಸಂಚಲನ ಜರುಗಿತು   

ನಿಡಗುಂದಿ: ‘ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಂದಲೇ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಿಲ್ಲ. ಇನ್ನು ತಂದೆಯ ನಾಮಬಲದಿಂದ ರಾಜಕಾರಣದಲ್ಲಿ ಹೆಜ್ಜೆಯನ್ನಿರಿಸಿದ ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ’ ಎಂದು ಉತ್ತರ ಕರ್ನಾಟಕ ಧರ್ಮ ಜಾಗರಣ ಪ್ರಾಂತ ಸಂಯೋಜಕ ದಿಲೀಪ್ ವರ್ಣೇಕರ ವ್ಯಂಗ್ಯವಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ತಾಲ್ಲೂಕಿನ‌ ಗೊಳಸಂಗಿ ಗ್ರಾಮದಲ್ಲಿ ಭಾನುವಾರ ಪಥ ಸಂಚಲನದ ಬಳಿಕ ನಡೆದ ಸಮಾರೋಪ ಸಮಾರಂಭದ ಅವರು ಮಾತನಾಡಿದರು.

‘ಸಂಘ ಮುಸಲ್ಮಾನರ ವಿರೋಧಿಯಲ್ಲ. ಸಂಘದಲ್ಲಿ ಜಾತಿ, ಅಂತಸ್ತಿಗೆ ಬೆಲೆ ಇಲ್ಲ. ಪಾಕಿಸ್ತಾನವನ್ನು ಹೊಗಳುವವರನ್ನು ಮಾತ್ರ ಸಂಘ ಸಹಿಸುವುದಿಲ್ಲ. ಭಾರತ ಹಿಂದುತ್ವದ ತಳಹದಿಯಾಗಬೇಕು ಎಂಬ ಸಂಕಲ್ಪ ಸಂಘದ್ದಾಗಿದೆ, ಆದರೆ ಇಂದು ನಮ್ಮ ಅಖಂಡತೆಯನ್ನೇ ಒಡೆದು ಆಳುವ ದೇಶದ್ರೋಹಿಗಳು ನಮ್ಮಲ್ಲಿದ್ದಾರೆ’ ಎಂದರು.

ADVERTISEMENT

ಮುತ್ತಗಿ ಸಂಸ್ಥಾನ ಹಿರೇಮಠದ ವೀರ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.

ಪಥಸಂಚಲನ: 2011ರ ಬಳಿಕ ಜರುಗಿದ ಪಥ ಸಂಚಲನಕ್ಕೆ ಇಡೀ ಗೊಳಸಂಗಿ ಗ್ರಾಮ ನವವಧುವಿನಂತೆ ಸಿಂಗಾರಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಪರಪರೆ, ಪಥ ಸಂಚಲನದ ದಾರಿಯುದ್ದಕ್ಕೂ ರಂಗೋಲಿ, ತಳಿರು ತೋರಣ, ದೇಶಭಕ್ತರ ವೇಷಧರಿಸಿ ಮೆರವಣಿಗೆಯನ್ನು ಸ್ವಾಗತಿಸಿದ ಪುಟಾಣಿ ಮಕ್ಕಳು ಎಲ್ಲವೂ ಇಡೀ ಗ್ರಾಮ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಅನುಭವ ನೀಡಿತು.

54 ನಿಮಿಷದಲ್ಲಿ 3ಕಿ.ಮೀ. ಕ್ರಮಿಸಿದ ಪಥ ಸಂಚಲನದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ 500ಕ್ಕೂ ಅಧಿಕ ಸ್ವಯಂ ಸೇವಕರು ಭಾಗಿಯಾಗಿದ್ದರು.

ಪೊಲೀಸರ ಸರ್ಪಗಾವಲು ಎಲ್ಲೆಡೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.