ADVERTISEMENT

ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಶಿಸ್ತು ಕ್ರಮ: ಶಾಸಕ ಸಿ.ಎಸ್.ನಾಡಗೌಡ

ಶಾಸಕ ನಾಡಗೌಡ ಎಚ್ಚರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 15:38 IST
Last Updated 28 ಜೂನ್ 2023, 15:38 IST
ತಾಳಿಕೋಟೆ ಪಟ್ಟಣದ ಪುರಸಭೆ ವತಿಯಿಂದ ನಡೆದ ನಗರೋತ್ಥಾನ 4ನೇ ಹಂತದ ಕಾಮಗಾರಿಗಳನ್ನು ಶಾಸಕ ಸಿ.ಎಸ್.ನಾಡಗೌಡ ಬುಧವಾರ ಪರಿಶೀಲನೆ ನಡೆಸಿದರು
ತಾಳಿಕೋಟೆ ಪಟ್ಟಣದ ಪುರಸಭೆ ವತಿಯಿಂದ ನಡೆದ ನಗರೋತ್ಥಾನ 4ನೇ ಹಂತದ ಕಾಮಗಾರಿಗಳನ್ನು ಶಾಸಕ ಸಿ.ಎಸ್.ನಾಡಗೌಡ ಬುಧವಾರ ಪರಿಶೀಲನೆ ನಡೆಸಿದರು   

ತಾಳಿಕೋಟೆ: ‘ಪುರಸಭೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳನ್ನು ನಿಯಮಾನುಸಾರ ಮಾಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಲೋಪವಾಗಿದ್ದಲ್ಲಿ ಸರಿಪಡಿಸಿಕೊಂಡು ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಒಂದು ಅವಕಾಶ ನೀಡಲಾಗುವುದು. ಗುಣಮಟ್ಟ ಕಾಪಾಡಿಕೊಳ್ಳದಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು’ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಅವರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬುಧವಾರ ನಗರೋತ್ಥಾನ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರರೊಂದಿಗೆ ಮಾತನಾಡಿದರು.

‘ಸಿಸಿ ರೋಡ್, ಪೇವರ ಜೋಡಣೆ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಜನರಲ್ಲಿ ಆಕ್ಷೇಪ ಇದೆ. ಹೀಗಾಗಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ನಾನು ಯಾವುದೇ ಕಾಮಗಾರಿಗಳಿಗೆ ತಡೆ ನೀಡುವಂತೆ ಹೇಳಿಲ್ಲ. ಬಹುತೇಕ ಕಾಮಗಾರಿಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಇರದಿದ್ದಕ್ಕೆ ಸರ್ಕಾರವೇ ತಡೆ ನೀಡಿದೆ. ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಕೆಲವರು ನಾನು ತಡೆ ನೀಡಿದ್ದೇನೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಬಹುತೇಕ ಕಾಮಗಾರಿಗಳು ನಿಯಮಾನುಸಾರ ಮಾಡಿಲ್ಲ. ಅಂದಾಜು ಪತ್ರಿಕೆಯಲ್ಲಿ ಇರುವಂತೆ ಕಾಮಗಾರಿ ಸ್ಥಳದಲ್ಲಿ ಕೆಲಸವಾಗಿಲ್ಲ. ಈ ರೀತಿ ಮಾಡದಂತೆ ಸೂಚನೆ ನೀಡಿದ್ದೇನೆ’ ಎಂದರು.

ADVERTISEMENT

ಎಸ್.ಕೆ.ನಗರ, ಟಿಪ್ಪು ನಗರ, ಬಸವ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸಿ ಹಲವು ಸಲಹೆ, ಸೂಚನೆಗಳನ್ನು ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಎಇಇ ಅನೀಲಕುಮಾರ ಮುದ್ದಾ, ಕಿರಿಯ ಎಂಜಿನಿಯರ್‌ ಶಂಕರಗೌಡ ಬಿರಾದಾರ, ಸದಾಶಿವ ಮನಗೂಳಿ, ಮಹಾಂತೇಶ ಪಾಟೀಲ, ಮುಖಂಡರಾದ ಪ್ರಭುಗೌಡ ಮದರಕಲ್ಲ, ಶರಣು ದೇಶಮುಖ, ವಿಜಯಸಿಂಗ ಹಜೇರಿ, ಸಿದ್ದನಗೌಡ ಪಾಟೀಲ, ಪರಶುರಾಮ ತಂಗಡಗಿ, ಫಯಾಜ ಉತ್ನಾಳ, ಆನಂದ ಹಜೇರಿ, ಎ.ಕೆ.ನಮಾಜಕಟ್ಟಿ ಇದ್ದರು.

ತಾಳಿಕೋಟೆ ಪಟ್ಟಣದ ಪುರಸಭೆ ವತಿಯಿಂದ ನಡೆದ ನಗರೋತ್ಥಾನ 4 ನೇ ಹಂತದ ಕಾಮಗಾರಿಗಳನ್ನು ಶಾಸಕ ಸಿ.ಎಸ್.ನಾಡಗೌಡ ಬುಧವಾರ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.