ADVERTISEMENT

ವಿಜಯಪುರ | 5 ದಿನ ಪೂರೈಸಿದ ಪ್ರತಿಭಟನೆ: ಸೂಕ್ತ ಪರಿಹಾರಕ್ಕಾಗಿ ನಿರಾಶ್ರಿತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:08 IST
Last Updated 20 ಅಕ್ಟೋಬರ್ 2025, 4:08 IST
ಬಸವನಬಾಗೇವಾಡಿ ಪಟ್ಟಣದ ಮಿನಿ ವಿಧಾನಸೌಧ ಮುಂಭಾಗ ತಾಲ್ಲೂಕಿನ ಕುದರಿಸಾಲವಾಡಗಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಡಿಎಸ್ಎಸ್ ಮುಖಂಡ ಗುರು ಗುಡಿಮನಿ ಮಾತನಾಡಿದರು
ಬಸವನಬಾಗೇವಾಡಿ ಪಟ್ಟಣದ ಮಿನಿ ವಿಧಾನಸೌಧ ಮುಂಭಾಗ ತಾಲ್ಲೂಕಿನ ಕುದರಿಸಾಲವಾಡಗಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಡಿಎಸ್ಎಸ್ ಮುಖಂಡ ಗುರು ಗುಡಿಮನಿ ಮಾತನಾಡಿದರು   

ಬಸವನಬಾಗೇವಾಡಿ: ತಾಲ್ಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ವಿಸ್ತರಣೆ ವಿಚಾರವಾಗಿ ತೆರವುಗೊಳಿಸಲಾದ 143 ಕ್ಕೂ ಅಧಿಕ ಮನೆಗಳನ್ನು‌ ಕಳೆದುಕೊಂಡ ನಿರಾಶ್ರಿತರಿಗೆ ಸೂಕ್ತ ಪರಿಹಾರ ಹಾಗೂ ಮನೆಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧದ ಎದುರು ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಭಾನುವಾರ ಐದನೇ ದಿನ ಪೂರೈಸಿತು.

ಡಿಎಸ್ಎಸ್ ಮುಖಂಡ ಗುರುರಾಜ ಗುಡಿಮನಿ ಮಾತನಾಡಿ, ‘ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ವಿಸ್ತರಣೆ ಹೆಸರಲ್ಲಿ ನೂರಾರು ಮನೆಗಳನ್ನು ತೆರವುಗೊಳಿಸುವ ಜೊತೆಗೆ ವಿವಿಧ ಸ್ಮಾರಕಗಳನ್ನು, ಮರಗಳನ್ನು ಧ್ವಂಸ ಮಾಡಲಾಗಿದೆ. ಇದರಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ರಸ್ತೆ ವಿಸ್ತರಣೆಯು ಶಾಸಕರ ಸ್ವಾರ್ಥಕ್ಕಾಗಿ ನಡೆದಿದೆ. ಬಡವರ ಹೊಟ್ಟೆಯ ಮೇಲೆ ರಾಜಕೀಯ ಬೇಡ. ರಸ್ತೆ ಅಂದಾಜು ಪತ್ರಿಕೆ, ಟೆಂಡರ್ ಆಗದೇ ಏಕಾಏಕಿ ರಸ್ತೆ ವಿಸ್ತರಣೆಗೆ ಶಾಸಕರು, ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಇದರಲ್ಲಿ ಶಾಸಕರ ಕುಮ್ಮಕ್ಕಿದೆ. ಇವರಿಗೆ ಬಡವರ ಕಣ್ಣೀರು ತಟ್ಟದೇ ಬಿಡುವುದಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ರಸ್ತೆ ವಿಸ್ತರಣೆಯಲ್ಲಿ ನಿರಾಶ್ರಿತರಾದ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ನಮ್ಮ ಧರಣಿ ನಿಲ್ಲುವುದಿಲ್ಲ. ಶನಿವಾರ ಸಂಜೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳು, ತಹಶೀಲ್ದಾರ್‌ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಹಿಂಪಡೆಯುವಂತೆ ಹೇಳಿದರು. ಆದರೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅವರು ಲಿಖಿತ ಭರವಸೆ ನೀಡದೇ ಇರುವುದರಿಂದ ನಮ್ಮ ಧರಣಿ ಮುಂದುವರಿಸಿದ್ದೇವೆ. ನಾಡಿನಲ್ಲಿ ದೊಡ್ಡ ಹಬ್ಬ ದೀಪಾವಳಿ ಇದ್ದರೂ ನಮಗೆ ಈ ಹಬ್ಬ ಕರಾಳತೆ ಉಂಟುಮಾಡಿದೆ. ಈಗಲಾದರೂ ಶಾಸಕರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದರು.

ADVERTISEMENT

ರೈತ ಮುಖಂಡ ಅರವಿಂದ ಕುಲಕರ್ಣಿ, ಕಾಂಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿದರು.

ಕಾಶೀಸಾಬ ಮುಲ್ಲಾ, ನಜೀರಪಟೇಲ ಗುಡ್ನಾಳ, ನೂರಲಾ ಹುಸೇನಿಜಿನಪಿರಾ ಪಿರಜಾದೆ, ಚಾಂದಸಾಬ ನಾಯ್ಕೋಡಿ, ಕಾಶೀಂಸಾಬ ಮುಲ್ಲಾ, ಶಾಂತಗೌಡ ಪಾಟೀಲ, ಗಣಿಸಾಬ ಕಾಜಾಪುರ, ಶರಣಪ್ಪ ಕಟಗಾರ, ದಾವಲಸಾಬ ಅತ್ತಾರ,ಕಾಮೇಶ ಭಜಂತ್ರಿ, ಮಲ್ಲನಗೌಡ ಪಾಟೀಲ, ಶ್ರೀಕಾಂತ ಹಚಡದ, ಪಾವೆಡವ್ವ ಇಂಗಳಗಿ, ಯಾಕೂಬ ಎಲಿಗಾರ, ರಜಾಬೇಗಂ ಎಲಿಗಾರ, ದಸ್ತಗೀರ ಅತ್ತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.