ADVERTISEMENT

ಡಿಜೆಯಿಂದ ದೇಶದ ಕಲೆ, ಸಂಸ್ಕೃತಿ ಮಾಯ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:57 IST
Last Updated 16 ಸೆಪ್ಟೆಂಬರ್ 2025, 4:57 IST
ಬಸವನಬಾಗೇವಾಡಿ ಪಟ್ಟಣದಲ್ಲಿ ಹಿಂದೂ ಮಹಾಗಣಪತಿ‌ ಮಹಾಮಂಡಳದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು
ಬಸವನಬಾಗೇವಾಡಿ ಪಟ್ಟಣದಲ್ಲಿ ಹಿಂದೂ ಮಹಾಗಣಪತಿ‌ ಮಹಾಮಂಡಳದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು   

ಬಸವನಬಾಗೇವಾಡಿ: ನಮ್ಮ ದೇಶದ ಪ್ರತಿಯೊಂದು ಹಬ್ಬಗಳಿಗೂ ಕಲೆ, ಸಂಸ್ಕಾರದ ಮೆರುಗು ಇದೆ. ಆದರೆ ಡಿಜೆ ಸಂಸ್ಕೃತಿಯಿಂದ ನಮ್ಮ ಕಲೆ, ಸಂಸ್ಕೃತಿ ಹಾಗೂ ನಮ್ಮಲ್ಲಿರುವ ಪ್ರತಿಭೆಗಳು ಮರೆಯಾಗುತ್ತಿವೆ. ಜಾತ್ಯತೀತ ಮನೋಭಾವದ ಜೊತೆಗೆ ಜಾತೀಯತೆ ಮರೆತು, ಮನುಷ್ಯತ್ವ ಮೆರೆಯುವ ಏಕೈಕ ಹಬ್ಬ ಗಣೇಶೋತ್ಸವ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಹಿಂದೂ ಮಹಾಗಣಪತಿ ಮಹಾಮಂಡಳದಿಂದ ಭಾನುವಾರ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ‌ ಕನ್ಯಾಕುಮಾರಿವರೆಗೂ‌ ಎಲ್ಲ ಹಿಂದೂಗಳು ಒಂದಾಗಿ ಆಚರಿಸುವ ಹಬ್ಬ ಗಣೇಶೋತ್ಸವ. ಸ್ವಲ್ಪ ಎಚ್ಚರ ತಪ್ಪಿದರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಹಾಸನದ ಗಣೇಶ ಮೆರವಣಿಗೆಯಲ್ಲಿ ಸಂಭವಿಸಿದ ದುರಂತವೇ ನಿದರ್ಶನ. ಹಬ್ಬಗಳಿರುವುದು ನಮ್ಮ‌ ಮನಸ್ಸುಗಳನ್ನು ಬೆಸೆಯಲು ಹೊರತು ಒಡೆಯಲು ಅಲ್ಲ. ಹಬ್ಬಗಳನ್ನು ದುರುಪಯೋಗ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಂಡರೆ ಹಬ್ಬಗಳಿಗೆ ಮೆರುಗು ಬರುತ್ತವೆ ಎಂದು ಹೇಳಿದರು.

ವಿರಕ್ತಮಠದ ಸಿದ್ದಲಿಂಗ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ‌ ಕಲಾವಿದ ಬಸವರಾಜ ಹಾರಿವಾಳ, ಮುಖಂಡರಾದ ಸಂಗಮೇಶ ಓಲೆಕಾರ, ಕಲ್ಲು ಸೊನ್ನದ, ಕದಳಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಬೆಳಗಾವಿ ವಿಹೆಚ್ಪಿ ವಿಭಾಗೀಯ ಕಾರ್ಯದರ್ಶಿ ವಿಠಲ ಮಾಳಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.

ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ವಿಎಚ್‌ಪಿ ಜಿಲ್ಲಾ ಪ್ರಮುಖ ಜಯಪ್ರಕಾಶ ಅಂಬಲಿ, ರಾಜೇಂದ್ರ ಪತ್ತಾರ, ಹಿಂದೂ ಮಹಾಗಣಪತಿ ಮಹಾಮಂಡಳ ಅಧ್ಯಕ್ಷ ಬಸವರಾಜ ಉಕ್ಕಲಿ, ಉಪಾಧ್ಯಕ್ಷ ನಾಗು ಯಂಭತ್ನಾಳ, ಸಂಜು ಬಿರಾದಾರ, ಅಪ್ಪು ಗಬ್ಬೂರ, ರಾಹುಲ‌ ಜಗತಾಪ, ಬಸವರಾಜ ಅಳ್ಳಗಿ, ಚನ್ನು ಶಿವಗೊಂಡ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.