ADVERTISEMENT

ವಿಜಯಪುರ: ಅನಾಥರ ‘ಚಳಿ’ ಬಿಡಿಸಿದ ವೈದ್ಯರ ಚಾದರ!

ಬಸ್‌, ರೈಲು ನಿಲ್ದಾಣ, ರಸ್ತೆ ಬದಿಯಲ್ಲಿ ರಾತ್ರಿ ಮಲಗುವವರಿಗೆ ಉಚಿತ ಜಮಖಾನ ವಿತರಣೆ

ಬಸವರಾಜ ಸಂಪಳ್ಳಿ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST
ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಲಗಿರುವ ಭಿಕ್ಷುಕರು, ಅನಾಥರಿಗೆ ವೈದ್ಯ ಡಾ. ಬಾಬು ರಾಜೇಂದ್ರ ನಾಯಿಕ ಅವರು ಜಮಖಾನವನ್ನು ಹೊದಿಸುತ್ತಿರುವುದು
ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಲಗಿರುವ ಭಿಕ್ಷುಕರು, ಅನಾಥರಿಗೆ ವೈದ್ಯ ಡಾ. ಬಾಬು ರಾಜೇಂದ್ರ ನಾಯಿಕ ಅವರು ಜಮಖಾನವನ್ನು ಹೊದಿಸುತ್ತಿರುವುದು   

ವಿಜಯಪುರ: ಗುಮ್ಮಟ ನಗರಿಯಲ್ಲಿ ದಿನದಿಂದ ದಿನಕ್ಕೆ ಮಾಗಿ ಚಳಿ ಮೈಕೊರೆಯುತ್ತಿದೆ. ಬಿಸಿ ಬಿಸಿ ಚಹಾ, ಕಾಫಿ ಕುಡಿದರೂ ಉಲನ್‌ ಸ್ವೆಟರ್‌, ಟೋಪಿ ತೊಟ್ಟರೂ ಮೈ ನಡುಕ ನಿಲ್ಲುತ್ತಿಲ್ಲ!

ಸಂಜೆ ಆರರಿಂದಲೇ ಚಳಿ, ಶೀತಗಾಳಿ ಬೀಸಲು ಆರಂಭಿಸಿದರೆ ಮುಂಜಾನೆ ಸೂರ್ಯೋದಯವಾದರೂ ಈ ಚಳಿ ನಿವಾರಣೆಯಾಗುತ್ತಿಲ್ಲ. ವಿಫರೀತ ಚಳಿಗೆ ವಿಜಯಪುರ ಜನ ತತ್ತರಿಸುತ್ತಿದ್ದಾರೆ.

ರಾತ್ರಿ ವೇಳೆ ಜಮಖಾನ ಹೊದ್ದುಮಲಗಿದರೂ ಈ ಚಳಿಯಿಂದ ಮುಕ್ತಿ ಸಿಗದು. ಕಂಬಳಿ ಹೊದೆಯಬೇಕು, ಬೆಂಕಿ ಕಾಯಿಸಬೇಕು ಎಂದೆನಿಸದೇ ಇರದು. ಇಂತಹ ಚಳಿಯಲ್ಲೂ ಪತ್ರಿಕೆ ವಿತರಕರು, ಹಾಲು ಹಾಕುವವರು, ತರಕಾರಿ ಮಾರಾಟ ಮಾಡುವವರು, ಬಸ್‌ ಚಾಲಕರು, ನಿರ್ವಾಹಕರು ವಿರಮಿಸಿದೇ ತಮ್ಮ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಲ್ಲದೇ, ನಗರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ಅಂಗಡಿ, ಮಳಿಗೆಗಳ ಎದುರು ನಡುಗುತ್ತಾ ರಾತ್ರಿ ಕಳೆಯುತ್ತಿರುವ ಅನಾಥರು, ನಿರ್ಗತಿಕರು ಭಿಕ್ಷುಕರ ಪಾಡು ಹೇಳತೀರದು.

ADVERTISEMENT

ಇಂಥ ಅನಾಥರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ರಾತ್ರಿ ವೇಳೆ ಬೆಚ್ಚನೆ ನಿದ್ರೆ ದೂರದ ಮಾತು. ಆದರೆ, ಇಲ್ಲೊಬ್ಬ ವೈದ್ಯರುನಗರದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ನಡುಗುತ್ತಾ ಮಲಗಿ ರಾತ್ರಿ ಕಳೆಯುತ್ತಿರುವ ನಿರ್ಗತಿಕರಿಗೆ, ಭಿಕ್ಷುಕರಿಗೆ ಜಮಖಾನ(ಚಾದರ)ಗಳನ್ನು ಹೊದಿಸುವ ಮೂಲಕ ಚಳಿಯಿಂದ ರಕ್ಷಣೆ ನೀಡಿದ್ದಾರೆ.

ಹೌದು, ನಗರ ತುಳಸಿ ಗಿರೀಶ ಮಧುಮೇಹ ಮತ್ತು ಹೃದ್ರೋಗ ಆಸ್ಪತ್ರೆ ವೈದ್ಯ, ಲಯನ್ಸ್‌ ಕ್ಲಬ್‌ ಬಿಜಾಪುರ ಪರಿವಾರದ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ನಾಯಿಕ ಅವರು ಸುಮಾರು 50ಕ್ಕೂ ಅಧಿಕ ನಿರಾಶ್ರಿತರಿಗೆ ಉಚಿತವಾಗಿ ಜಮಖಾನ ವಿತರಿಸಿದ್ದಾರೆ.

ರಾತ್ರಿ ವೇಳೆ ಅವರು ಮಲಗಿರುವ ಸ್ಥಳಕ್ಕೆ ತಾವೇ ತೆರಳಿ, ಅವರ ಮೈಮೇಲೆ ದಪ್ಪನೆಯ ಜಮಖಾನವನ್ನು ಹೊದಿಸಿ ಬರುತ್ತಿದ್ದಾರೆ. ವೈದ್ಯರ ಈ ಸೇವೆಯಿಂದ ಅನಾಥರು, ಭಿಕ್ಷುಕರು ಚಳಿಯಿಂದ ಪಾರಾಗಲು ಒಂದಷ್ಟು ಸಹಾಯವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯ ಡಾ.ಬಾಬುರಾಜೇಂದ್ರ ನಾಯಿಕ, ‘ನಾನು ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ. ಚಳಿಯಲ್ಲಿ ಆ ಜೀವಗಳು ನಡುಗದಿರಲಿ ಎಂಬ ಆಶಯದಿಂದ ಮಾನವೀಯ ಕಳಕಳಿಯಿಂದ ಈ ಕಾರ್ಯ ಮಾಡುತ್ತಿರುವೆ‘ ಎನ್ನುತ್ತಾರೆ.

‘ಸರ್ವ ಋತುಗಳಿಗೂ ಬಳಸಬಹುದಾದ ಸೋಲ್ಲಾಪುರದ ಜಮಖಾನಗಳನ್ನು ಖರೀದಿಸಿ ತಂದಿದ್ದು, ನಗರದ ರಸ್ತೆ ಬದಿಯಲ್ಲಿ, ಬಸ್‌, ರೈಲು ನಿಲ್ದಾಣದ ಆವರಣದಲ್ಲಿ ಮಲಗುವವರಿಗೆ ಉಚಿತವಾಗಿ ನೀಡುತ್ತಿದ್ದೇನೆ. ನನ್ನ ಈ ಕೆಲಸಕ್ಕೆ ಲಯನ್ಸ್‌ ಕ್ಲಬ್‌ ಬಿಜಾಪುರ ಪರಿವಾರ, ಬಿಜೆಪಿ ಯುವ ಮೋರ್ಚಾ, ವೈದ್ಯಕೀಯ ಪ್ರಕೋಷ್ಠ ಕೈಜೋಡಿಸಿದೆ’ ಎಂದು ಹೇಳಿದರು.

ಕೋವಿಡ್‌ ಒಂದು ಮತ್ತು ಎರಡನೇ ಅಲೆ ಸಂದರ್ಭದಲ್ಲೂ ಬಾಬು ರಾಜೇಂದ್ರ ನಾಯಿಕ ಅವರು ಕೊರೊನಾ ಜಾಗೃತಿ ಕಾರ್ಯದಲ್ಲಿ ತೊಡಗಿದ್ದರು. ಅಲ್ಲದೇ, ಅನಾಥರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಕಿಟ್‌ ವಿತರಿಸಿ, ಮೆಚ್ಚುಗೆಗೆ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.