ADVERTISEMENT

ದೇವರಹಿಪ್ಪರಗಿ | ನಾಯಿ ಕಡಿತ ಪ್ರಕರಣ ಹೆಚ್ಚಳ: ಲಸಿಕೆ ಕೊರತೆ

ದೇವರಹಿಪ್ಪರಗಿ ಸೇರಿದಂತೆ ಜಿಲ್ಲೆಯಲ್ಲಿ ತಲೆದೋರಿದ ನಾಯಿಗಳ ಹಾವಳಿ

ಅಮರನಾಥ ಹಿರೇಮಠ
Published 25 ಮೇ 2025, 5:29 IST
Last Updated 25 ಮೇ 2025, 5:29 IST
<div class="paragraphs"><p>ದೇವರಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಲಸಿಕೆ ಪಡೆದುಕೊಳ್ಳಲು ಸರದಿಯಲ್ಲಿ ಕುಳಿತುಕೊಂಡ ರೋಗಿಗಳು.</p></div>

ದೇವರಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಲಸಿಕೆ ಪಡೆದುಕೊಳ್ಳಲು ಸರದಿಯಲ್ಲಿ ಕುಳಿತುಕೊಂಡ ರೋಗಿಗಳು.

   

ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವಂತೆ ಚಿಕಿತ್ಸೆಗಾಗಿ ದೊರೆಯುವ ಲಸಿಕೆಯ ಕೊರತೆ ಕಾಡುತ್ತಿದ್ದು, ಸಾರ್ವಜನಿಕರು ಚುಚ್ಚುಮದ್ದಿಗಾಗಿ ಪರದಾಡುವಂತಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಈಗೀಗ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಯಿ ಕಡಿತದ ನಂತರ ರೈಬಿಫೋರ್ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನಾಲ್ಕು ಹಂತಗಳಲ್ಲಿ ರೋಗಿ ಪಡೆಯಬೇಕಾಗಿದೆ. ಆದರೆ, ಲಸಿಕೆಯ ಲಭ್ಯತೆಯ ಕೊರತೆ ಕಾಡಲಾರಂಭಿಸಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಸಂದೀಪ ಕಡ್ಲೇವಾಡ, ಈ ಮುಂಚೆ ತಿಂಗಳಿಗೆ ಹೆಚ್ಚೆಂದರೆ 20 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಈಗ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇವರಿಗೆ ಲಸಿಕೆ ಪೂರೈಸುವುದು ಅಗತ್ಯವಾಗಿದೆ. ಆದರೆ, ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ಸರಣಿ ರೂಪದಲ್ಲಿ ನೀಡಬೇಕಾಗಿರುವುದರಿಂದ ಸವಾಲಾಗಿ ಪರಿಣಮಿಸಿದೆ’ ಎಂದರು.

‘ನಮ್ಮ ಪಿಎಚ್‌ಸಿ ವ್ಯಾಪ್ತಿ 11 ಗ್ರಾಮಗಳ 50 ಸಾವಿರ ಜನಸಂಖ್ಯೆಗೆ ಸಿಮೀತವಾಗಿದೆ. ನಾವು ನಮ್ಮ ವ್ಯಾಪ್ತಿ ಪ್ರದೇಶದಲ್ಲಿನ ನಾಯಿ ಕಡಿತದ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಲಸಿಕೆಯ ಲಭ್ಯತೆ ಹೊಂದಿದ್ದೇವು. ಆದರೆ, ಈಗ ಪಟ್ಟಣ ತಾಲ್ಲೂಕು ಕೇಂದ್ರ ಸ್ಥಳವಾಗಿರುವ ಕಾರಣ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವ ಗ್ರಾಮಗಳ ರೋಗಿಗಳು ಸಹ ಪಟ್ಟಣದ ಪಿಎಚ್‌ಸಿಗೆ ಬರುವುದರಿಂದ ಲಸಿಕೆ ನೀಡಲಾಗುವುದಿಲ್ಲ ಎಂದು ಹೇಳುವಂತಿಲ್ಲ. ಅದಕ್ಕಾಗಿ ಕೊರತೆ ಕಾಡಲಾರಂಭಿಸಿದೆ’ ಎಂದು ಹೇಳಿದರು.

‘ಲಸಿಕೆಯ ಕೊರತೆ ನಮ್ಮ ಪಿಎಚ್‌ಸಿಗೆ ಮಾತ್ರ ಸಿಮೀತವಾಗಿಲ್ಲ. ಜಿಲ್ಲಾ ಕೇಂದ್ರದ ಮಳಿಗೆಯಲ್ಲಿಯೂ ಸಹ ಕೊರತೆಯಿದೆ. ಬೇರೆ ತಾಲ್ಲೂಕು ಹಾಗೂ ಪಿಎಚ್‌ಸಿ ವ್ಯಾಪ್ತಿಯ ಗ್ರಾಮಗಳಲ್ಲಿ ನಾಯಿ ಕಡಿತಕ್ಕೆ ಒಳಗಾದವರು ಬಂದಾಗ ಲಸಿಕೆ ನೀಡಲು ಬಾರದು ಎಂದು ಹೇಳದೆ ₹ 400ರಿಂದ ₹600 ವರೆಗೆ ಹಣ ನೀಡಿ ಹೊರಗಡೆಯ ಔಷಧ ಮಳಿಗೆಗಳಿಂದ ಲಸಿಕೆ ಖರೀದಿಸಿ ರೋಗಿಗಳಿಗೆ ನೀಡಲಾಗಿದೆ. ಲಸಿಕೆಯ ಕೊರತೆ ಕುರಿತು ಕ್ಷೇತ್ರದ ಶಾಸಕರ ಗಮನ ಸೆಳೆಯಲಾಗಿದೆ’ ಎಂದು ವಾಸ್ತವಿಕ ವಿಷಯ ಬಿಚ್ಚಿಟ್ಟರು.

‘ಪಟ್ಟಣದ ಯುವಕನೊಬ್ಬ ನಾಯಿ ಕಡಿತದಿಂದ ಇತ್ತೀಚಿಗೆ ಮೃತಪಟ್ಟಿದ್ದು, ನಾಯಿ ಕಡಿತದ ಗಂಭೀರತೆಯನ್ನು ತಿಳಿಸುವಂತಿದೆ. ಬೇರೆಲ್ಲಾ ರೋಗಗಳಿಗೆ ಖಾಸಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುವ ಸಾರ್ವಜನಿಕರು, ನಾಯಿ ಕಡಿತದ ಲಸಿಕೆಗೆ ಮಾತ್ರ ಪಿಎಚ್‌ಸಿಗೆ ಆಗಮಿಸುತ್ತಾರೆ. ಆದ್ದರಿಂದ ಜಿಲ್ಲಾ ಔಷಧ ಸಂಗ್ರಹಾಲಯದಲ್ಲಿ ಲಸಿಗೆ ಲಭ್ಯತೆ ನೋಡಿಕೊಳ್ಳುವುದರ ಜೊತೆಗೆ ಬೇಡಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಲಸಿಕೆ ವಿತರಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಮ್ಮೂರ ಮಕ್ಕಳ ಧಾಮ ನಿರ್ದೇಶಕ ವಾಸುದೇವ ತೋಳಬಂದಿ, ಸಾಮಾಜಿಕ ಕಾರ್ಯಕರ್ತರಾದ ರಮೇಶಬಾಬು ಮೆಟಗಾರ, ನಜೀರ್ ಕಲಕೇರಿ ಆಗ್ರಹಿಸಿದರು.

ದೇವರಹಿಪ್ಪರಗಿ ಪಿಎಚ್‌ಸಿಯಲ್ಲಿ ಈಗಾಗಲೇ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮುಂದೆ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಡಾ.ಆರ್.ಎಸ್.ಇಂಗಳೆ, ಟಿಎಚ್ಓ ಸಿಂದಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.