
ವಿಜಯಪುರ: ‘ಬೆಣ್ಣೆ ಹಳ್ಳದ ಮಾದರಿಯಲ್ಲಿ ಡೋಣಿ ನದಿ ಹೂಳೆತ್ತುವ ಕುರಿತು ₹200 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಸೋಮವಾರ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಎನ್.ಆರ್.ಎಲ್.ಎಂ ಕಲಿಕಾ ಕಟ್ಟಡ, ಗೋದಾಮು ಹಾಗೂ ಜಲ ಸಂಗ್ರಹಕ್ಕೆ ಅನುಕೂಲವಾಗುವ ಕಲ್ಯಾಣಿ ಉದ್ಘಾಟನೆ ಹಾಗೂ ಡೋಣಿ ಪ್ರವಾಹದಿಂದಾಗಿ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ತೊನಶ್ಯಾಳ ಗ್ರಾಮದ 312 ಕುಟುಂಬಗಳಿಗೆ 17 ವರ್ಷಗಳ ನಂತರ ಹಕ್ಕುಪತ್ರ ವಿತರಿಸಿ ಮಾತನಾಡಿದರು.
‘ಡೋಣಿ ನದಿ ಹೂಳೆತ್ತುವುದರಿಂದ ಅನೇಕ ಪ್ರಯೋಜನಗಳು ಆಗಲಿದ್ದು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಣ್ಣೆಹಳ್ಳದ ಯೋಜನೆ ಮಾದರಿಯಲ್ಲಿ ₹200 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ’ ಎಂದರು.
‘ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ. ಈ ನಿಟ್ಟಿನಲ್ಲಿ ಕಾಯಕನಿರತನಾಗಿರುವುದಾಗಿ ಹೇಳಿದರು. ನೀರಾವರಿ ಕ್ರಾಂತಿಯ ಬಳಿಕ ಈಗ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಲುವೆಗಳ ವ್ಯಾಪ್ತಿಯಲ್ಲಿ ಬರುವ 156 ಹಳ್ಳಗಳಿಗೆ ತುಂಬಿಸುವ ಯೋಜನೆ ರೂಪಿಸಲಾಗಿದೆ. ಹಳ್ಳಗಳಲ್ಲಿ ಹೂಳು ತೆಗೆಯಿಸಿ ಪ್ರತಿ ಕಿಲೋ ಮೀಟರ್ ಅಂತರದಲ್ಲಿ ಒಂದೊಂದು ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಬಬಲೇಶ್ವರ ಮತಕ್ಷೇತ್ರದಲ್ಲಿ 10 ಪ್ಯಾಕೇಜುಗಳ ಪೈಕಿ ಆರು ಪ್ಯಾಕೇಜುಗಳಿಗೆ ಟೆಂಡರ್ ಕರೆಯಲಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಾಗಲಿದೆ’ ಎಂದರು.
ಮುಖಂಡ ಸೋಮನಾಥ ಕಳ್ಳಿಮನಿ, ಸಿಇಒ ರಿಷಿ ಆನಂದ ಮಾತನಾಡಿದರು.
ಜಕನೂರಿನ ಮಾದುಲಿಂಗ ಮಹಾರಾಜರು, ಸೋಮದೇವರಹಟ್ಟಿ ಜಗನು ಮಹಾರಾಜರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಜಾಧವ, ಮುಖಂಡರಾದ ಬಿ.ಡಿ. ಆಸಂಗಿ, ಗಿರಮಲ್ಲ ಮಾದರ, ಅಡಿವೇಪ್ಪ ಕೋಲಕಾರ, ವಿ.ಎಸ್. ಪಾಟೀಲ, ವಿ.ಎನ್. ಬಿರಾದಾರ, ಮಲ್ಲು ಪರಸಣ್ಣವರ, ಸಿ.ಜಿ. ಪಾರೆ ಇದ್ದರು.