ADVERTISEMENT

‘ಕುಡಿಯುವ ನೀರಿನ ಸಮಸ್ಯೆಯಾಗದಿರಲಿ’

ನೀರಿನ ನಿರ್ವಹಣೆ ಕುರಿತ ಅಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:28 IST
Last Updated 13 ಏಪ್ರಿಲ್ 2024, 14:28 IST
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಮಾತನಾಡಿದರು
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಮಾತನಾಡಿದರು   

ವಿಜಯಪುರ: ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆಯಾಗುವಲ್ಲಿ ತುರ್ತಾಗಿ ಕ್ರಮ ಕೈಗೊಂಡು ನೀರು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತು ಅಧಿಕಾರಿಗಳ ಜೊತೆ  ಶುಕ್ರವಾರ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಸದ್ಯ ಯಾವುದೇ ಸಮಸ್ಯೆಯಿಲ್ಲ, ಆದ್ಯಾಗೂ ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಲಭ್ಯವಿರುವ ನೀರಿನ ಸದ್ಭಳಕೆ ಮಾಡಿ ಸಮರ್ಪಕ ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು. 

ಹೊನಗನಹಳ್ಳಿಯ 5 ಎಂಎಲ್‍ಡಿ ನೀರು ಸರಬರಾಜು ಸಮಸ್ಯೆ ಕುರಿತು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಪರಿಹರಿಸಲು ಸೂಚಿಸಿದರು.

ADVERTISEMENT

ನಗರದ ಹೊರವಲಯದಲ್ಲಿ ಮನೆಗಳು ಹೆಚ್ಚು ನಿರ್ಮಾಣವಾಗಿದ್ದರಿಂದ ನೀರಿನ ಅವಶ್ಯಕತೆ ಹೆಚ್ಚಾಗಲಿದೆ. ನೀರಿನ ಅಭಾವವನ್ನು ಕಡಿಮೆಗೊಳಿಸಲು ನಗರದಲ್ಲಿರುವ ವಿವಿಧ ಕೊಳವೆಬಾವಿ, ಕೈ ಪಂಪ್‌ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ಒಟ್ಟು 502 ಕೊಳವೆಬಾವಿಗಳ ಪೈಕಿ 476 ಚಾಲ್ತಿಯಲ್ಲಿದ್ದು, ಚಾಲ್ತಿಯಲ್ಲಿರದ 26 ಕೊಳವೆಬಾವಿಗಳು ವಿವಿಧ ನಗರದ ಹೊರವಲಯದಲ್ಲಿ ವಿಸ್ತರಣೆಗೊಂಡ ಪ್ರದೇಶದಲ್ಲಿದ್ದು, ಅವುಗಳ ದುರಸ್ತಿಗೆ ಕ್ರಮವಹಿಸಬೇಕು. ಇದರಿಂದ ವಿವಿಧ ವಾರ್ಡ್‌ಗಳಿಗೆ ಹೆಚ್ಚುವರಿ ನೀರು ಒದಗಿಸಲು ಸಾಧ್ಯ ಎಂದು ತಿಳಿಸಿದರು. 

ಸುಸ್ಥಿತಿಯಲ್ಲಿರದ ಕೊಳವೆಬಾವಿಗಳನ್ನು ಮುಚ್ಚಲು ಕ್ರಮ ವಹಿಸಬೇಕು, ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ನಗರದಲ್ಲಿರುವ 33 ತೆರೆದ ಬಾವಿಗಳಿದ್ದು, ಅವುಗಳಲ್ಲಿ 7 ತೆರೆದ ಬಾವಿಗಳಲ್ಲಿ ನೀರಿನ ಝರಿ ಕಡಿಮೆಯಾಗಿದ್ದು, ರಿ-ಡ್ರೀಲ್ಲಿಂಗ್ ಮಾಡುವ ಮೂಲಕ ಸುಸ್ಥಿತಿಯಲ್ಲಿಡಲು ಪ್ರಯತ್ನಿಸಬೇಕು. ಅದ್ಯಾಗೂ ನೀರಿನ ಝರಿ ಬರದಿದ್ದರೇ ತೆರೆದೆ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೌಜಲಗಿ ತಾಂಡಾ ಹೊರತುಪಡಿಸಿ ಉಳಿದೆಡೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದ್ದು, ಭೂತನಾಳ ತಾಂಡಾದಲ್ಲಿನ ಪೈಪ್‌ಲೈನ್ ಕಾಮಗಾರಿಗೆ ವಿಪತ್ತು ನಿಧಿಯಡಿ ₹2ಲಕ್ಷ ವರೆಗಿನ ದುರಸ್ತಿ ಕಾಮಗಾರಿ ಅನುದಾನ ಒದಗಿಸಲು ಅವಕಾಶವಿದ್ದು, ತಾಂಡಾದಲ್ಲಿ ಪೈಪಲೈನ್ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.

ಸಾರ್ವಜನಿಕರು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡದಂತೆ ಮನವರಿಕೆ ಮಾಡಲು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಅರ್ಶದ ಶರೀಫ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರೀತಮ ನಸ್ಲಾಪುರ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.