ADVERTISEMENT

ಸಿಂದಗಿ ಹೆಮ್ಮೆ ಡಾ.ಅಂಬೇಡ್ಕರ್ ಭವನ

ಉತ್ತಮ ಪರಿಸರ; ಸಭಾಂಗಣ ಎಲ್ಲರಿಗೂ ಉಚಿತ

ಶಾಂತೂ ಹಿರೇಮಠ
Published 27 ಜುಲೈ 2019, 14:12 IST
Last Updated 27 ಜುಲೈ 2019, 14:12 IST
ಸಿಂದಗಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ
ಸಿಂದಗಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ   

ಸಿಂದಗಿ: ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಭವನ ಜಿಲ್ಲೆಯಲ್ಲಿಯೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸಿಂದಗಿಯ ಹೆಮ್ಮೆಯೇ ಸರಿ.

25 ವರ್ಷಗಳ ಹಿಂದೆ ಈ ಜಾಗದಲ್ಲಿ ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದೇ ಸಂದರ್ಭದಲ್ಲಿ ರಾಜಶೇಖರ ಕೂಚಬಾಳ ಅವರು ಈ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಸಂಕಲ್ಪ ಘೋಷಿಸಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರಾತಿಗೆ ಸಹಕರಿಸಿದರು. ಕೂಚಬಾಳ ಅವರು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ ಎಸ್‌ಎಫ್‌ಸಿಯ ಶೇ. 18ರ ಅನುದಾನದಲ್ಲಿ ಮೊದಲ ಹಂತದಲ್ಲಿ ₹ 17.37 ಲಕ್ಷ ಅನುದಾನವನ್ನು ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಿಸಿದರು. ಎರಡನೇ ಹಂತದಲ್ಲಿ ₹ 9 ಲಕ್ಷ, ಮೂರನೇ ಹಂತದಲ್ಲಿ ₹ 10 ಲಕ್ಷ ಹೀಗೆ ಒಟ್ಟು ₹ 36.37 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಮುಂದುವರೆಯಿತು.

ಪುರಸಭೆ ಅನುದಾನದಲ್ಲಿ ಕಟ್ಟಡ ಪೂರ್ಣಗೊಳ್ಳುವುದಿಲ್ಲ ಎಂಬುದನ್ನು ಅರಿತು 2016ರ ಅವಧಿಯಲ್ಲಿ ಶಾಸಕರಾಗಿದ್ದ ರಮೇಶ ಭೂಸನೂರ ಬಳಿ ಕೂಚಬಾಳ ನೇತೃತ್ವದಲ್ಲಿ ದಲಿತ ಮುಖಂಡರು ಭವನಕ್ಕಾಗಿ ₹ 20 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಅವರು ಸಮಾಜ ಕಲ್ಯಾಣ ಇಲಾಖೆಯಿಂದ ₹ 50 ಲಕ್ಷ ರೂಪಾಯಿ ಸಮಾಜಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿಸಿದರು.

ADVERTISEMENT

ಈ ಅನುದಾನವನ್ನು ಬಾಕಿ ಉಳಿದ ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ಕಾಮಗಾರಿಗೆ ಬಳಸಲಾಯಿತು. ಮತ್ತೆ ₹ 50 ಲಕ್ಷ ಪ್ರಸ್ತಾವವನ್ನು ಭೂಸನೂರ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ, ಚುನಾವಣೆ ಕಾರಣ ಆ ಪ್ರಕ್ರಿಯೆ ಸ್ಥಗಿತಗೊಂಡಿತು. ಇದೀಗ ಅನುದಾನ ಬಿಡುಗಡೆಗೆ ಶಾಸಕ ಎಂ.ಸಿ.ಮನಗೂಳಿ ಅವರನ್ನು ಒತ್ತಾಯಿಸಲಾಗಿದೆ.

‘ಅಂಬೇಡ್ಕರ್ ಭವನ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ. ಸರ್ಕಾರಿ ಕಾರ್ಯಕ್ರಮಗಳೆಲ್ಲವೂ ಇದೇ ಭವನದಲ್ಲಿ ನಡೆಯುತ್ತವೆ. ರೈತ, ದಲಿತ, ಮಹಿಳಾ ಪರ ಚಟುವಟಿಕೆಗಳು ಇಲ್ಲೇ ಜರುಗುತ್ತವೆ. ವಿವಾಹ ಸಮಾರಂಭಗಳಿಗೆ ಭವನ ಉಚಿತವಾಗಿ ನೀಡಲಾಗುತ್ತದೆ. ಆದರೆ, ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಕನಿಷ್ಠ ಶುಲ್ಕವನ್ನು ಪಡೆಯುತ್ತೇವೆ’ ಎಂದು ಭವನದ ರೂವಾರಿ ರಾಜಶೇಖರ ಕೂಚಬಾಳ ಹೇಳುತ್ತಾರೆ.

ಭವನವು ಸುಂದರ ಪರಿಸರ ಹೊಂದಿದ್ದು, ಬಾಹ್ಯ ಸೌಂದರ್ಯಕ್ಕಾಗಿ ಕೂಚಬಾಳ ಸ್ವಂತ ಹಣ ಖರ್ಚು ಮಾಡಿದ್ದಾರೆ.

ಭವನದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ 10 ಸಾವಿರ ಗ್ರಂಥಗಳು, ದಿನ ಪತ್ರಿಕೆ, ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗಾಗಿ ಬುಕ್ ಬ್ಯಾಂಕ್, ವ್ಯಾಯಾಮ ಶಾಲೆ, ಹಲವಾರು ಕ್ರೀಡಾ ಸಾಮಗ್ರಿಗಳೂ ಇವೆ. ರಮಾಬಾಯಿ ಅಧ್ಯಯನ ಕೇಂದ್ರವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.