ADVERTISEMENT

ರಾಜ್ಯಪಾಲರ ವಾಪಸ್‌ಗೆ ಡಿಎಸ್‌ಎಸ್‌ ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಮಾನವ ಸರಪಳಿ ರಚನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:42 IST
Last Updated 29 ಆಗಸ್ಟ್ 2024, 14:42 IST
ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)ಯಿಂದ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು 
ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)ಯಿಂದ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು    

ವಿಜಯಪುರ: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿಲು ಯತ್ನಿಸಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ವಾಪಸ್‌ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿವೃತ್ತದಲ್ಲಿ ಮಾನವ ಸರಪಳಿ ರಚಿಸಿ, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದರು.  ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮನವಿ ಸ್ವೀಕರಿಸಿದರು.

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಬಿ.ಜೆ.ಪಿ, ಜೆ.ಡಿ.ಎಸ್ ಮುಖಂಡರು ಸೇರಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಾಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಡಿ.ಎಸ್.ಎಫ್. ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ಜನರ ಆಶೀರ್ವಾದದಿಂದ ರಚನೆಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಕೇಂದ್ರ ಸರ್ಕಾರವು ಬಳಸಿಕೊಳ್ಳುತ್ತಿದೆ. ರಾಷ್ಟ್ರಪತಿಗಳು ಇದೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಕೂಡಲೇ ಗಮನಹರಿಸಿ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಬೇಕು. ಬಹುಮತ ಹೊಂದಿರುವ ರಾಜ್ಯ ಕಾಂಗ್ರೆಸ್‌ ಪಕ್ಷದ ಸರ್ಕಾರ  ಸುಗಮವಾಗಿ ನಡೆಯಲು ಸೂಕ್ತ ಕ್ರಮ ಜರುಗಬೇಕು ಜನತಂತ್ರ ವ್ಯವಸ್ಥೆಯನ್ನು ಬುಡ ಮೇಲು ಮಾಡಲು ಹೊರಟಿರುವ ಬಿ.ಜೆ.ಪಿ, ಜೆ.ಡಿ.ಎಸ್ ನಡೆಯನ್ನು ಖಂಡಿಸುತ್ತೇವೆ ಎಂದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಮುಖಂಡರಾದ ಫಯಾಜ್‌ ಕಲಾದಗಿ, ಸತೀಶ ಅಡವಿ, ರಮೇಶ ಧರಣಾಕರ, ಮಹಾಂತೇಶ ಸಾಸಬಾಳ, ವಿಜಯಕುಮಾರ ಕಾಂಬಳೆ, ರಮೇಶ ಚಲವಾದಿ, ರಮೇಶ ನಿಂಬಾಳಕರ, ದಶರಥ ಇಟಗಿ, ಅವಿನಾಶ ಬಾಣಿಕೋಲ, ರಮೇಶ ವೀರಕರ, ದೇವೇಂದ್ರ ಬಾವಿಮನಿ, ಜಾನು ಗುಡಿಮನಿ, ಅರುಣ ಗವಾರಿ ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.