ಡಾ.ಎಸ್.ಎ.ಪುಣೇಕರ
ವಿಜಯಪುರ: ವಿಜಯಪುರದ ಪ್ರತಿಷ್ಠಿತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ, ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ ಡಾ.ಎಸ್.ಎ.ಪುಣೇಕರ (90) ವಯೋಸಹಜತೆಯಿಂದ ಮಂಗಳವಾರ ನಿಧನರಾದರು.
ಅವರಿಗೆ ಪತ್ನಿ, ನಾಲ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ತಾಂತ್ರಿಕ ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದ್ದರು. ಮುಂಬೈ ಮಹಾನಗರ ಪಾಲಿಕೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮಧ್ಯಪ್ರದೇಶದಲ್ಲಿ ಬಿಲಾಹಿ ಸ್ಟೀಲ್ ಪ್ಲಾಂಟ್‍ದಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ, ಹೆಸರು ಮಾಡಿದ್ದರು.
ವಿಜಯಪುರದ ಶೈಕ್ಷಣಿಕ ಸ್ಥಿತಿಗತಿಯನ್ನು ಬಲ್ಲವರಾಗಿದ್ದ ಅವರು ತವರೂರಿಗೆ ಮರಳಿ 1969ರಲ್ಲಿ ‘ಸಿಕ್ಯಾಬ್’ ಶಿಕ್ಷಣ ಸಂಸ್ಥೆ ಆರಂಭಿಸಿದರು. ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, 28ಕ್ಕೂ ಅಧಿಕ ಶೈಕ್ಷಣಿಕ ಶಾಲಾ, ಕಾಲೇಜುಗಳು ಸಿಕ್ಯಾಬ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದೆ, 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರಳಾಗಿದೆ.
ಡಾ. ಪುಣೇಕರ ಅವರು ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ‘ಹೆಣ್ಣು ಮಕ್ಕಳ ಹೊಲಿಗೆ ತರಬೇತಿ ಕೇಂದ್ರ’ವನ್ನು ಸ್ಥಾಪಿಸಿ ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮಹಿಳಾ ಪದವಿ ಕಾಲೇಜು ಸ್ಥಾಪಿಸಿದ ಕೀರ್ತಿ ಇವರದಾಗಿದೆ.
ವಿಜಯಪುರ ನಗರದಲ್ಲಿ ಬಡ, ಮಧ್ಯಮ ವರ್ಗದವರಿಗೆ ಸುಲಭ ಬೆಲೆಯಲ್ಲಿ ನಿವೇಶನಗಳು ದೊರೆಯಬೇಕೆಂಬ ಉದ್ಧೇಶದಿಂದ 1968ರಲ್ಲಿ ‘ಸರ್ಕಾರಿ ಹಾಗೂ ಅರೆ ಸರ್ಕಾರಿ ಗೃಹ ನಿರ್ಮಾಣ ಸಹಕಾರಿ ಸಂಘ‘ ಸ್ಥಾಪಿಸಿ 800ಕ್ಕೂ ಅಧಿಕ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ನಿವೇಶನಗಳು ದೊರೆಯುವಂತೆ ಮಾಡಿದ್ದರು.
ಶಂಸುದ್ದೀನ್ ಪುಣೇಕರ ಅವರ ಶೈಕ್ಷಣಿಕ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದ ಮೌಲಿಕ ಸೇವೆ ಗುರುತಿಸಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ‘ಮೊಹಸೀನ್-ಎ-ಮಿಲ್ಲತ್’ ಪ್ರಶಸ್ತಿ (2019), ಅಸೋಸಿಯನ್ ಆಫ್ ಮುಸ್ಲಿಂ ಪ್ರೊಫೆಷನಲ್ ಮುಂಬೈ ಎ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ(2022), ಕಲಬುರ್ಗಿಯ ಬಹುಮನಿ ಪ್ರತಿಷ್ಠಾನದ ಜೀವಮಾನ ಸಾಧನೆ ಪ್ರಶಸ್ತಿ(2023), ಸೋಲಾಪುರದ ಗೆಸ್ಕೊ ಸಂಸ್ಥೆ ಕೊಡಮಾಡುವ ನಿಶಾನ್-ಎ-ಗ್ರೇಸಿಯಸ್ ಪ್ರಶಸ್ತಿ (2024) ಹಾಗೂ ಬೀದರ್‌ನ ಶಾಹಿನ್ ಶಿಕ್ಷಣ ಸಂಸ್ಥೆ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿ (2024), ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ(2025) ನೀಡಿ ಗೌರವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.