ADVERTISEMENT

ವಿಜಯಪುರ | ನಂದಿ ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ: ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:42 IST
Last Updated 21 ಏಪ್ರಿಲ್ 2025, 14:42 IST
ವಿಜಯಪುರ ನಗರದಲ್ಲಿ ಸೋಮವಾರ ನಡೆದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಿತರಕ್ಷಣಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು
ವಿಜಯಪುರ ನಗರದಲ್ಲಿ ಸೋಮವಾರ ನಡೆದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಿತರಕ್ಷಣಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು   

ವಿಜಯಪುರ: ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದು, ಒಂದು ವಾರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಸಚಿವರ ಗೃಹ ಕಚೇರಿಯಲ್ಲಿ ಕಾರ್ಖಾನೆ ಹಿತರಕ್ಷಣೆ ಕುರಿತು ರೈತರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.

‘ಸಕ್ಕರೆ ಕಾರ್ಖಾನೆ ಉಳಿವಿಗೆ ಎನ್.ಸಿ.ಡಿ.ಸಿ ಯೋಜನೆಯಡಿ ಸಾಲ ಒದಗಿಸುವಂತೆ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಆದ್ಯತೆಯ ಆಧಾರದ ಮೇಲೆ ಕಾರ್ಖಾನೆಯ ಮನವಿಯನ್ನು ಪರಿಗಣಿಸಿ ನೆರವು ನೀಡುವಂತೆ ಕೋರಿದ್ದೇನೆ. ಇನ್ನು ಮುಂದೆ ಸಚಿವ ಎಚ್. ಕೆ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಜೆ. ಟಿ. ಪಾಟೀಲ ಮತ್ತು ನಾನಾ ಮುಖಂಡರೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ನೆರವಿಗೆ ವಿನಂತಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಇಂದು ಕೂಡ ನಾನು ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಭೇಟಿಗೆ ದಿನಾಂಕ ನಿಗದಿ ಪಡಿಸಲು ಕೇಳಿದ್ದೇನೆ. ಒಂದು ವಾರದಲ್ಲಿ ದಿನಾಂಕ ನಿಗದಿಯಾಗಲಿದ್ದು, ಈ ಸಭೆಗೆ ಸಂಬಂಧಿಸಿದ ಎಲ್ಲ ಮುಖಂಡರು ಬರುಬೇಕು. ವಿಜಯಪುರ ಮತ್ತು ಕಾರ್ಖಾನೆಗೆ ಸಂಬಂಧಿಸಿದ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಒಂದು ಕಾಲದಲ್ಲಿ ದೇಶದಲ್ಲಿಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಮೊದಲ ಸ್ಥಾನದಲ್ಲಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅನೇಕ ಪ್ರಶಸ್ತಿ ಮತ್ತು ಪ್ರಶಂಸೆಗಳನ್ನು ಪಡೆದಿತ್ತು. ಆದರೆ, ವಿಸ್ತರಣೆ ಯೋಜನೆ ಕೈಗೊಂಡ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದೆ. ನಾನು ಈ ಹಿಂದೆ ನೀಡಿದ ಭರವಸೆಯಂತೆ ಷೇರುಗಳನ್ನು ಪಡೆಯುತ್ತೇನೆ. ಅಲ್ಲದೇ, ಕಾರ್ಖಾನೆಯನ್ನು ಗತವೈಭವಕ್ಕೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು‌‌.

ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ, ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ದೇಸಾಯಿ, ನಿರ್ದೇಶಕ  ಶಶಿಕಾಂತಗೌಡ ಪಾಟೀಲ, ಮುಖಂಡರಾದ ಶಿವನಗೌಡ ಪಾಟೀಲ ಯಡಹಳ್ಳಿ, ಬಸವರಾಜ ದೇಸಾಯಿ, ಬಿ.ಡಿ.ಪಾಟೀಲ, ಆರ್.ಪಿ.‌ಕೊಡಬಾಗಿ, ಟಿ.ಆರ್. ಪಚ್ಚಣ್ಣವರ, ಜೆ.ಡಿ.ದೇಸಾಯಿ, ಎಲ್.ಎಸ್. ನಿಡೋಣಿ, ಆರ್.ಪಿ.ರಾಘಾ, ಲಕ್ಷ್ಮಣ ಚಿಕದಾನಿ, ಉಮೇಶ ಮಲ್ಲಣ್ಣವರ, ಎಚ್.ಬಿ.ಹರನಟ್ಟಿ, ಸುರೇಶ ದೇಸಾಯಿ, ಬಿ.ಬಿ.ಪಾಟೀಲ, ಮಲ್ಲು ದಳವಾಯಿ, ರಮೇಶ ಬಡ್ರಿ, ಅಪ್ಪುಗೌಡ ಪಾಟೀಲ, ಡಾ.ಕೆ.ಎಚ್.ಮುಂಬಾರಡ್ಡಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.