ವಿಜಯಪುರ: ಬಬಲೇಶ್ವರ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿಸಲು ಮತಕ್ಷೇತ್ರದಾದ್ಯಂತ ರಸ್ತೆ, ವಿದ್ಯುತ್, ನೀರಾವರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಮಮದಾಪುರ-ದೂಡಿಹಾಳ ಮೂಲಕ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಸೇರುವ ಜಿಲ್ಲಾ ಮುಖ್ಯರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಮಮದಾಪುರ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶೇಗುಣಸಿಯಿಂದ ಮಮದಾಪುರವರೆಗೆ ಸುಮಾರು 9.5 ಕಿ.ಮೀ. ರಸ್ತೆಯನ್ನು ₹15 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮುಂದುವರೆದ ಭಾಗವಾಗಿ ಮಮದಾಪುರದಿಂದ 218 ರಾಷ್ಟ್ರೀಯ ಹೆದ್ದಾರಿ ವರೆಗೆ 11.6 ಕಿ.ಮೀ. ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮತಕ್ಷೇತ್ರದಲ್ಲಿಯೇ ಮಮದಾಪುರ ಹೋಬಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದರು.
ಬಹುದಶಕಗಳ ಕನಸಾಗಿದ್ದ ಮಮದಾಪುರ ಕೆರೆ ತುಂಬಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಸುತ್ತಲಿನ ರೈತರಿಗೆ ಅನುಕೂಲವಾಗಿದೆ. ಕೆಲ ದಿನಗಳ ಹಿಂದೆ ಹಿಂದುಸ್ತಾನ ಕೋಕಾಕೋಲಾ ಬೆವೆರಜಿಸ್ ಕಂಪನಿಯಿಂದ ಸಿಎಸ್‍ಆರ್ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಮಮದಾಪುರದಲ್ಲಿನ 1600 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ಅತ್ಯುತ್ತಮ ಸೌಕರ್ಯಗಳನ್ನೊಳಗೊಂಡ ಅರಣ್ಯ ಪ್ರದೇಶವನ್ನಾಗಿ ಅಭಿವೃದ್ದಿಪಡಿಸಿ, ಸೈನ್ಸ್ ಮ್ಯೂಸಿಯಂ, ಮಕ್ಕಳ ಚಟುವಟಿಕೆಗಾಗಿ ಪ್ರತ್ಯೇಕ ತಾಣ ಸೇರಿದಂತೆ ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದರು.
ದೇವರಗೆನ್ನೂರ ದಿಂದ ಕೊಡಬಾಗಿಕ್ರಾಸ್ ವರೆಗಿನ 6 ಕಿ.ಮೀ ರಸ್ತೆಗೆ ₹9ಕೋಟಿ ವೆಚ್ಚ ಮಾಡಲಾಗಿದೆ. ಕಂಬಾಗಿ–ಮಮದಾಪುರ 6 ಕಿ.ಮೀ. ರಸ್ತೆಗೆ ₹8ಕೋಟಿ, ಕೊಡಬಾಗಿ-ಜೈನಾಪುರ ವಯಾ ಮಂಗಳೂರ 5ಕಿ.ಮೀ, ಹಳೆ ಜೈನಾಪುರದಿಂದ ಜೈನಾಪುರ 3ಕಿ.ಮೀ. ರಸ್ತೆಗೆ ₹4.50 ಕೋಟಿ ವೆಚ್ಚ ಮಾಡಲಾಗಿದೆ. ಶೇಗುಣಸಿ-ಮಮದಾಪುರ 9.5 ಕಿ.ಮೀ. ರಸ್ತೆಗೆ ₹15 ಕೋಟಿ ವೆಚ್ಚ ಮಾಡಿ ಅಭಿವೃದ್ದಿ ಪಡಿಸಲಾಗಿದೆ ಎಂದರು.
ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸಿ.ಬಿ. ಚಿಕ್ಕಲಕಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.