ನಿಡಗುಂದಿ: ‘ಈ ದೇಶದಲ್ಲಿ ಸಾಮರಸ್ಯದಿಂದ ಬದುಕು ನಡೆಸಲು ಅವಕಾಶ ಕಲ್ಪಿಸಿಕೊಟ್ಟವರು ಡಾ.ಅಂಬೇಡ್ಕರ್ ಅವರು. ದೇಶದಲ್ಲಿ ಬೌದ್ಧ ಧರ್ಮ ಬೆಳವಣಿಗೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ’ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಪಟ್ಟಣದ ಎಚ್.ಪಿ.ಎಸ್ ಶಾಲೆಯ ಆವರಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್‌ವರ 134ನೇ ಜಯಂತ್ಯುತ್ಸವ ಹಾಗೂ ಅಂಬೇಡ್ಕರ್ ರತ್ನ ಪ್ರಶಸ್ತಿ ವಿತರಣೆ, ಪ್ರತಿಭಾ ಪುರಸ್ಕಾರ, ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಸಿದ್ದರಾಮಯ್ಯ ಆರು ಸಾವಿರ ಕೋಟಿ ಇದ್ದ ಎಸ್‌ಸಿಪಿ ಟಿಎಸ್‌ಪಿ ಹಣ ₹42 ಸಾವಿರ ಕೋಟಿಗೆ ಏರಿಸಿ ದಲಿತ ಏಳ್ಗೆಗೆ ಶ್ರಮಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ದಲಿತರಿಗೆ ಭೂಮಿ ಹಂಚಿಕೆ ಆಗಿಲ್ಲ. ಆದರೆ ರಾಜ್ಯ ಸರ್ಕಾರ ಹಂಚಿಕೆಗೆ ಮುಂದಾಗಿದೆ’ ಎಂದರು.
ವಿಶ್ರಾಂತ ಉಪನ್ಯಾಸಕ ಎಚ್.ಟಿ.ಪೋತೆ ಮಾತನಾಡಿ, ಎಸ್ಸಿ.ಎಸ್ಟಿ ಜನಾಂಗದವರು ಶೇ 15ರಷ್ಟು ಮೀಸಲು ಪಡೆದುಕೊಂಡರೂ ಅಂಬೇಡ್ಕರ್ ಜಯಂತಿ ಮಾಡುತ್ತಾರೆ.ಆದರೆ ಶೇ 32ರಷ್ಟು ಮೀಸಲಾತಿ ಪಡೆದ ಜನಾಂಗದವರು ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ. ಜಾತಿ ಗಣತಿಯಿಂದ ಏನೂ ಲಾಭವಿಲ್ಲ. ಇದು ಕಣ್ಣೋರೆಸುವ ತಂತ್ರ. ಅಂಬೇಡ್ಕರ್ ಅವರ ಚಿಂತನೆ ತತ್ವಗಳನ್ನು ಅರ್ಥಮಾಡಿಕೊಂಡಿಲ್ಲ. ನಾವೆಲ್ಲ ಸ್ವಾರ್ಥಿಗಳಾಗಿದ್ದೇವೆ. ಬೌದ್ಧ ಧರ್ಮ ಕೊಟ್ಟು ಹೋದ ಅಂಬೇಡ್ಕರ್ ಅವರಿಗೆ ನಾವೆಲ್ಲ ಮೋಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಉಪನ್ಯಾಸಕಿ ಸುಜಾತಾ ಚಲವಾದಿ, ರಾಜು ಕೂಚಬಾಳ, ಎಚ್.ಎಚ್.ದೊಡಮನಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ನಿಡಗುಂದಿ ರುದ್ರಮುನಿ ಶಿವಾಚಾರ್ಯರು,ಎಸ್.ಜಿ.ನಾಗಠಾಣ,ಅಭಿಷೇಕ ಚಕ್ರವರ್ತಿ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ ವಂದಾಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಬಿ.ಟಿ.ಗೌಡರ, ಸಂಗಮೇಶ ಬಳಿಗಾರ, ಎಂ.ಎಂ.ಮುಲ್ಲಾ, ಶಾಮ್ ಪಾತ್ರದ,ಬಿ.ಡಿ.ಚಲವಾದಿ, ಕುಮಾರ ಬಾಗೇವಾಡಿ, ಶೇಖರ ದೊಡಮನಿ, ಪ್ರಶಾಂತ ಚಲವಾದಿ, ಸಿಂಧೂರ ಭೈರವಾಡಗಿ, ಚಂದ್ರಶೇಖರ ನುಗ್ಲಿ,ಬಸವರಾಜ ಆಲಕೊಪ್ಪರ, ಡೋಂಗ್ರಿ ಭಜಂತ್ರಿ,ಕಾಮೇಶ ಭಜಂತ್ರಿ,ಬಸವರಾಜ ನಿಡಗುಂದಿ,ಸಿ.ಜಿ.ವಿಜಯಕರ್ ಇದ್ದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಒಟ್ಟು ಎಂಟು ಜೋಡಿ ದಂಪತಿ ನವಜೀವನಕ್ಕೆ ಕಾಲಿರಿಸಿದರು.
ವಧು–ವರರು ಪ್ರತಿಭಾವಂತರ ಹೆಸರಲ್ಲಿ ಹಣ ಠೇವಣಿ:
ಸಚಿವರ ಭರವಸೆ ‘ನೂತನ ವಧು–ವರರ ಹೆಸರಿನಲ್ಲಿ ತಲಾ ₹51 ಸಾವಿರ ಠೇವಣಿಯನ್ನು ನಾಲ್ಕು ವರ್ಷದವರೆಗೆ ಇಡುತ್ತೇನೆ. ಹೊಸದಾಗಿ ಮದುವೆಯಾದ ದಂಪತಿ ಸಹಿಯನ್ನು ಅದಕ್ಕೆ ಜೋಡಿಸಿ ಠೇವಣಿ ಮಾಡುತ್ತೇನೆ. ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ವಿದ್ಯಾರ್ಥಿಗೆ ₹51 ಸಾವಿರ ಅತೀ ಹೆಚ್ಚು ಅಂಕ ಪಡೆದ ಇನ್ನುಳಿದ ಏಳು ವಿದ್ಯಾರ್ಥಿಗಳ ಹೆಸರಲ್ಲಿ ₹25 ಸಾವಿರ ಠೇವಣಿ ಇರಿಸುತ್ತೇನೆ’ ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.