ವಿಜಯಪುರ: ‘ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ಜಿಲ್ಲೆಯಾದ್ಯಂತ 90 ತೊಗರಿ ಖರೀದಿ ಕೇಂದ್ರಗಳು ಹಾಗೂ 9 ಕಡಲೆಕಾಳು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ರೈತರ ನೋಂದಣಿ ಕಾರ್ಯ ಪ್ರಾರಂಭಿಸಲಾಗಿದೆ’ ಎಂದು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ರೈತರು ತಮ್ಮ ಹೆಸರು ನೋಂದಣಿ ಮಾಡಿಸಿ ತೊಗರಿ ಮತ್ತು ಕಡಲೆಗಳನ್ನು ಮಾರಾಟ ಮಾಡಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸರ್ಕಾರದ ಆದೇಶದನ್ವಯ ಎಫ್.ಎ.ಕ್ಯೂ ಗುಣಮಟ್ಟದ ಕನಿಷ್ಠ ಬೆಂಬಲ ಬೆಲೆ ₹7,550ರಂತೆ ಹಾಗೂ ರಾಜ್ಯ ಸರ್ಕಾರದ ಪ್ರೊತ್ಸಾಹಧನ ₹ 450 ಸೇರಿದಂತೆ ಒಟ್ಟು ₹ 8 ಸಾವಿರ ಪ್ರತಿ ಕ್ವಿಂಟಲ್ ದರದಲ್ಲಿ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಠ 40 ಕ್ವಿಂಟಲ್ ತೊಗರಿ ಖರೀದಿಸಲಾಗುವುದು ಎಂದರು.
ಕನಿಷ್ಠ ಬೆಂಬಲ ಬೆಲೆ ₹5,650ರಂತೆ ಪ್ರತಿ ಕ್ವಿಂಟಲ್ ದರದಲ್ಲಿ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಠ 20 ಕ್ವಿಂಟಲ್ ಕಡಲೆಕಾಳು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರು ತಮ್ಮ ಸಮೀಪದ ಪಿಎಸಿಎಸ್, ಟಿಎಪಿಸಿಎಂಎಸ್, ಎಫ್‍ಪಿಓ ಸಂಘಗಳಲ್ಲಿ ನೋಂದಣಿ ಮಾಡಿಸಿ ತೊಗರಿ ಮತ್ತು ಕಡಲೆಕಾಳನ್ನು ಮಾರಾಟ ಮಾಡಬಹುದಾಗಿದೆ ಎಂದರು.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ವಿಜಯಪುರ ಮೊ: 9449864452 ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.