ADVERTISEMENT

ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 4:50 IST
Last Updated 18 ಮಾರ್ಚ್ 2024, 4:50 IST
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದಲ್ಲಿ ರೈತ ಹೇಮರಡ್ಡಿ ಮೇಟಿ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಮಣುಕ ಮಾಡಲು ಹಾಕಿರುವುದು
ಮುದ್ದೇಬಿಹಾಳ ತಾಲ್ಲೂಕು ಬಸರಕೋಡದಲ್ಲಿ ರೈತ ಹೇಮರಡ್ಡಿ ಮೇಟಿ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಮಣುಕ ಮಾಡಲು ಹಾಕಿರುವುದು   

ಮುದ್ದೇಬಿಹಾಳ: ತಾಲ್ಲೂಕಿನ ಬಸರಕೋಡದ ರೈತ ಹೇಮರಡ್ಡಿ ಮೇಟಿ ಅವರ ಹೊಲದಲ್ಲಿ ಎಲ್ಲೆಲ್ಲೂ ದ್ರಾಕ್ಷಿ ಹಣ್ಣಿನ ಗೊಂಚಲುಗಳು ಕಣ್ಣು ಸೆಳೆಯುತ್ತವೆ.

ಬಸರಕೋಡದ ಗುಡ್ಡಗಾಡು ಪ್ರದೇಶದ ಕಲ್ಲು, ಮಣ್ಣುಗಳಿಂದ ಕೂಡಿ ಜಮೀನನ್ನು 2013ರಲ್ಲಿ ಖರೀದಿಸಿದ್ದ ಹೇಮರಡ್ಡಿ ಮೇಟಿ ಅವರು, ಶ್ರಮದಿಂದ ದುಡಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವದಿಂದ ಎರಡು ವರ್ಷ ಈ ನೆಲವನ್ನು ಸಮತಟ್ಟುಗೊಳಿಸಿ, ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದಾರೆ. ರೂಢಗಿ, ಬಸರಕೋಡ, ಗೆದ್ದಲಮರಿ, ಬ್ಯಾಲ್ಯಾಳ ಕೆರೆಯ ಹೂಳು ಮಣ್ಣು ತಂದು ಹೊಲಕ್ಕೆ ಹಾಕಿ ಸಮತಟ್ಟು ಮಾಡಿದ್ದಾರೆ.

ಅಂದಾಜು 37 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬಿತ್ತನೆ ಮಾಡಿದ್ದು, ತಮ್ಮ ಜಮೀನಿನಲ್ಲಿ 50ಕ್ಕೂ ಹೆಚ್ಚು ಕೂಲಿಕಾರರಿಗೆ ಕೆಲಸ ಕೊಟ್ಟಿದ್ದಾರೆ.

ADVERTISEMENT

‘ಬಸರಕೋಡದ ದ್ರಾಕ್ಷಿ ರಾಷ್ಟ್ರ ರಾಜಧಾನಿ ದೆಹಲಿ, ಪಕ್ಕದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಪೂರೈಕೆಯಾಗುತ್ತಿದೆ. 2018–19ರಲ್ಲಿ ಇಲ್ಲಿನ ದ್ರಾಕ್ಷಿಯನ್ನು ಯುರೋಪ್‌ ದೇಶಗಳಿಗೂ ಕಳಿಸಿದ್ದೇವು’ ಎಂದು ರೈತ ಮೇಟಿ ಅವರು ನೆನಪಿಸಿಕೊಳ್ಳುತ್ತಾರೆ.

ಮಣುಕಕ್ಕೂ ಬೇಡಿಕೆ: ಈ ಸಲ ಹಸಿ ದ್ರಾಕ್ಷಿಗಿಂತ ಮಣುಕಕ್ಕೂ (ಒಣ ದ್ರಾಕ್ಷಿ) ಬೇಡಿಕೆ ಹೆಚ್ಚಿದೆ. ₹200 ರಿಂದ ₹ 250ಕ್ಕೆ ಕೆ.ಜಿಯಂತೆ ಸಗಟು ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ ಎಂದು ಮೇಟಿ ತಿಳಿಸಿದರು.

‘ಇಲ್ಲಿನ ದ್ರಾಕ್ಷಿಯನ್ನು ಮಹಾರಾಷ್ಟ್ರದ ತಾಸಗಾಂವ್‌ ಕೋಲ್ಡ್‌ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಬೆಲೆ ಏರಿಕೆ ಕಂಡಾಗ ದ್ರಾಕ್ಷಿ ಹಾಗೂ ಮಣುಕ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಹೇಮರಡ್ಡಿ ಮೇಟಿ.

‘ಕಬ್ಬು ಕಟಾವಿನ ಬಳಿಕ ಉಳಿಯುವ ರವದಿಯನ್ನೇ ದ್ರಾಕ್ಷಿ ಬೆಳೆಗೆ ಗೊಬ್ಬರವನ್ನಾಗಿ ಮಾಡಿದ್ದು, ತಿಪ್ಪೆಗೊಬ್ಬರವನ್ನು ಹೆಚ್ಚಾಗಿ ಬಳಸಿದ್ದಾರೆ. ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ನಮ್ಮ ಸುತ್ತಮುತ್ತಲೇ ದೊರೆಯುವ ನೈಸರ್ಗಿಕ ಗೊಬ್ಬರವನ್ನು ಬಳಸಿದರೆ ಇಳುವರಿ ಹೆಚ್ಚು ಬರುತ್ತದೆ. ಭೂಮಿಯ ಫಲವತ್ತತೆಯನ್ನು ಹೆಚ್ಚು ದಿನಗಳ ಕಾಲ ಕಾಪಾಡಿಕೊಳ್ಳಲು ಸಾಧ್ಯವಿದೆ’ ಎಂಬುದು ರೈತ ಮೇಟಿ ಅವರ ಮಾತು.

ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡದ ರೈತ ಹೇಮರಡ್ಡಿ ಮೇಟಿ ಅವರ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿ
ಒಂದು ಕಾಳು ಬೆಳೆಯದಿದ್ದ ಜಮೀನಿನಲ್ಲಿ ಇದೀಗ ದ್ರಾಕ್ಷಿ ಬೆಳೆಯುತ್ತಿದ್ದೇನೆ. ಉತ್ತಮ ಲಾಭ ತಂದುಕೊಟ್ಟಿದೆ
- ಹೇಮರಡ್ಡಿ ಮೇಟಿ ದ್ರಾಕ್ಷಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.