ADVERTISEMENT

₹30 ಸಾವಿರ ಪಡೆದು ಹಸು ಖರೀದಿಸದ ರೈತರು: ಶಾಸಕ ಅಶೋಕ ಮನಗೂಳಿ ವಿಷಾದ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:52 IST
Last Updated 9 ಜುಲೈ 2025, 5:52 IST
ಸಿಂದಗಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೆಯ ಸಾಲಿನ ಕೃಷಿ ಯಂತ್ರೋಪಕರಣ ವಿತರಣೆ ಮತ್ತು ಮುಂಗಾರು ಹಂಗಾಮಿನ ತಾಂತ್ರಿಕ ಮಾಹಿತಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ರೈತರಿಗೆ ಜಾಗೃತಿ ಮೂಡಿಸುವ ಕೃಷಿ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು
ಸಿಂದಗಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೆಯ ಸಾಲಿನ ಕೃಷಿ ಯಂತ್ರೋಪಕರಣ ವಿತರಣೆ ಮತ್ತು ಮುಂಗಾರು ಹಂಗಾಮಿನ ತಾಂತ್ರಿಕ ಮಾಹಿತಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ರೈತರಿಗೆ ಜಾಗೃತಿ ಮೂಡಿಸುವ ಕೃಷಿ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು   

ಸಿಂದಗಿ: ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹಿಸಲು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರೈತರಿಗೆ ಹಸು ಖರೀದಿಸಲು ₹ 30 ಸಾವಿರ ನೀಡಿದ್ದರೂ, ಹಣ ಪಡೆದವರು ಹಸುಗಳನ್ನೇ ಖರೀದಿಸಿಲ್ಲ ಎಂದು ಶಾಸಕ ಅಶೋಕ ಮನಗೂಳಿ ವಿಷಾದಿಸಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಇಂಡಿ ಕೃಷಿ ವಿಜ್ಞಾನ ಕೇಂದ್ರ, ಕೃಷಿಕ ಸಮಾಜ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೆಯ ಸಾಲಿನ ಕೃಷಿ ಯಂತ್ರೋಪಕರಣ ವಿತರಣೆ ಮತ್ತು ಮುಂಗಾರು ಹಂಗಾಮಿನ ತಾಂತ್ರಿಕ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದಂತೆ ಮುಂಬರುವ ದಿನಗಳಲ್ಲಿ ಹಿಂಗಾರು ಹಂಗಾಮಿನ ಕುರಿತಾಗಿಯೂ ರೈತರ ಸಮಾವೇಶ ಆಯೋಜನೆ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಶಾಸಕರು ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣ ವಿತರಿಸಲಾಯಿತು.

ಚೆನ್ನವೀರಸ್ವಾಮೀಜಿ ರೈತ ಉತ್ಪಾದನಾ ಕೇಂದ್ರದ ಅಶೋಕ ಅಲ್ಲಾಪುರ ಮಾತನಾಡಿ, ‘ಕಳೆದ ಸಲ ತೊಗರಿ ಬೆಳೆ ಸಮೀಕ್ಷೆಯಲ್ಲಿ ಅಚಾತುರ್ಯ ಉಂಟಾಗಿತ್ತು. ಹೀಗಾಗಿ ಈ ಸಲ ಹಾಗಾದಂತೆ ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆ ಮಾಡಬೇಕು’ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿರುವ 15 ಸಾವಿರ ರೈತ ಉತ್ಪಾದನಾ ಕೇಂದ್ರಗಳಿಗೆ ಸರ್ಕಾರದ ಸೌಲಭ್ಯ ಒದಗಿಸುವಂತಾಗಬೇಕು. ರೈತರು ಹೆಚ್ಚು, ಹೆಚ್ಚು ಸಾವಯವ ಕೃಷಿಗೆ ಅವಲಂಬಿತರಾಗಬೇಕು ಎಂದು ತಿಳಿಸಿದರು.

ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಇಂಡಿ ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಮಾತನಾಡಿದರು.

ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮೋಮಿನ್, ಕೃಷಿ ವಿಜ್ಞಾನಿಗಳಾದ ಡಾ.ಪ್ರಕಾಶ, ಪ್ರೇಮಚಂದ ಪಾಲ್ಗೊಂಡಿದ್ದರು.

ಸಾವಯವ ಕೃಷಿಕ ಸುನೀಲ ನಾರಾಯಣಕರ ತಾವು ಉತ್ಪಾದಿಸಿದ ಸಾವಯವ ಬೆಲ್ಲ, ಸಾವಯವ ಅರಿಸಿಣವನ್ನು ಶಾಸಕರಿಗೆ ನೀಡಿದರು.

ಕೃಷಿ ಸಮಾಜದ ಶಿವಪ್ಪಗೌಡ ಬಿರಾದಾರ, ಬಸಯ್ಯ ಹಿರೇಮಠ, ರಮೇಶ ಪೂಜಾರ, ಮೋರಟಗಿಯ ನಿಂಗನಗೌಡ ಪಾಟೀಲ ಹಾಗೂ ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ ಆಹೇರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಶೈಲಜಾ ಸ್ಥಾವರಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.