
ಸಿಂದಗಿ: ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಜಂಟಿ ಕಾರ್ಮಿಕ ಸಂಘಟನೆ(ಸಿಐಟಿಯು) ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತ ತಲುಪಿ ಅಲ್ಲಿಂದ ಅಂಬೇಡ್ಕರ್ ವೃತ್ತಕ್ಕೆ ಮರಳಿತು. ಅಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಸಾಮಾಜಿಕ, ಆರ್ಥಿಕವಾಗಿ ಪಂಚಾಯಿತಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿದರು.
ಅಂಗನವಾಡಿ ನೌಕರರಿಗೆ ದ್ರೋಹ ಬಗೆದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಲಿ ಎಂದು ಒತ್ತಾಯಿಸಿದರು. ಬಿಸಿಯೂಟ ನೌಕರರನ್ನು ಕಾಯಂಗೊಳಿಸುವವರೆಗೆ ₹26 ಸಾವಿರಕ್ಕೆ ಕನಿಷ್ಠ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ, ಅಂಗನವಾಡಿ ನೌಕರರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷೆ ಸರಸ್ವತಿ ಮಠ, ಡಿವೈಎಫ್ಐ ತಾಲ್ಲೂಕು ಶಾಖೆ ಅಧ್ಯಕ್ಷ ರಮೇಶ ತಳವಾರ ಮಾತನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಶಾಖೆಯ ಬಸೀರಅಹ್ಮದ ತಾಂಬೆ, ಗ್ರಾಮ ಪಂಚಾಯಿತಿ ನೌಕರರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಎಂ.ಎಸ್.ಕೊಂಡಗೂಳಿ, ಕಾರ್ಯದರ್ಶಿ ಬಿ.ಎಂ.ಸುರಪುರ, ಅಂಗನವಾಡಿ ನೌಕರರ ಸಂಘದ ಪ್ರತಿಭಾ ಕುರಡೆ, ಬಿಸಿಊಟ ನೌಕರರ ಸಂಘದ ಸೈನಾಜ್ ಮುಲ್ಲಾ, ರೇಣುಕಾ ಸುಣಗಾರ, ಎಂ.ಕೆ.ಚಳ್ಳಗಿ, ಗ್ರಾಮ ಪಂಚಾಯಿತಿ ನೌಕರರ ಸಂಘ ಆಲಮೇಲ ತಾಲ್ಲೂಕು ಶಾಖೆಯ ಚಾಂದಸಾಬ ಅಡಾಡಿ, ದೇವರಹಿಪ್ಪರಗಿ ತಾಲ್ಲೂಕು ಶಾಖೆಯ ಶಿವಾನಂದ ಬಿರಾದಾರ, ಡಿವೈಎಫ್ಐ ನ ಶಾಂತಪ್ಪ ಹೊಸಮನಿ, ಸ್ವಚ್ಛ ವಾಹಿನಿ ನೌಕರರ ಸಂಘದ ಪೂಜಾ ದೇವರ, ಇಂದುಮತಿ ಕಡಿಮನಿ, ಸವಿತಾ ಕೊಕಟನೂರ, ಸುಭದ್ರಾ ತಿಳಗೂಳ, ಕವಿತಾ ವಸ್ತ್ರದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.