ADVERTISEMENT

ರಾಜ್ಯ ಬಿಜೆಪಿಗೆ ಇನ್ನೂ 10 ವರ್ಷ ನಾನೇ ನಾಯಕ: ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಸಂದೇಶ

ಬಿಜೆಪಿ ವರಿಷ್ಠರಿಗೆ, ಎದುರಾಳಿಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಸಂದೇಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 15:39 IST
Last Updated 7 ಜೂನ್ 2022, 15:39 IST
ವಿಜಯಪುರ  ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಮಂಗಳವಾರ ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪಕ್ಷದ ಮುಖಂಡರ ಮತ್ತು ಮತದಾರರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ  ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಮಂಗಳವಾರ ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪಕ್ಷದ ಮುಖಂಡರ ಮತ್ತು ಮತದಾರರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ‘ನನಗೆ ವಯಸ್ಸಾಗಿದೆ ಎಂಬ ಚಿಂತೆ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಬೇಡ. ಇನ್ನೂ 10 ವರ್ಷ ರಾಜ್ಯದಾದ್ಯಂತ ಪ್ರವಾಸ ಮಾಡಿ, ಪಕ್ಷ ಕಟ್ಟಿ ಅಧಿಕಾರಕ್ಕೆ ತರುತ್ತೇನೆ’ ಎಂದುಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಟುರು ಹಾಕುವ ಮೂಲಕ ಮುಂದಿನ ಚುನಾವಣೆಗಳನ್ನು ನನ್ನ ಸಾರಥ್ಯದಲ್ಲೇ ನಡೆಸಬೇಕು, ಯಾವುದೇ ಕಾರಣಕ್ಕೂ ನನ್ನನ್ನು ಕಡೆಗಣಿಸಬಾರದು ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ಪರೋಕ್ಷವಾಗಿ ರವಾನಿಸಿದರು.

ವಿಧಾನ ಪರಿಷತ್ ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಕ್ಷದ ಮುಖಂಡರ ಮತ್ತು ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 140 ಶಾಸಕರನ್ನು ಆರಿಸಿಕೊಂಡು ಬರಲು ಈಗಿನಿಂದಲೇ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಕರೆ ನೀಡಿದರು.

ADVERTISEMENT

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಮತ್ತು ಯುವ ಮೋರ್ಚಾವನ್ನು ಇನ್ನಷ್ಟು ಸಂಘಟಿಸುವ ಅಗತ್ಯವಿದೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಬಿಜೆಪಿಯಲ್ಲಿರುವಷ್ಟು ಬಲಿಷ್ಠ ಕಾರ್ಯಕರ್ತರ ಪಡೆ ಬೇರಾವ ಪಕ್ಷದಲ್ಲೂ ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ ಮುಖಂಡರ ಟೀಕೆಗಳಿಗೆ ಜೂನ್‌ 13ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು, ಮತದಾರರು ಸೂಕ್ತ ಉತ್ತರ ನೀಡಬೇಕಿದೆ ಎಂದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿಜುಗೌಡ ಪಾಟೀಲ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಅವರಿಗೂ ಇಂದಲ್ಲ, ನಾಳೆಒಳ್ಳೆಯ ಕಾಲ ಬರಲಿದೆ ಎಂದು ಸೂಕ್ಷವಾಗಿ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಲ್ಲೇ ಶ್ರೇಷ್ಠವೆನಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಜಾರಿಗೆ ತರಲಾಗಿದೆ. ಗುಣಾತ್ಮಕ ಶಿಕ್ಷಣ ನೀಡಲು, ಮಕ್ಕಳನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರವನ್ನು ರೂಪಿಸಲಾಗಿದೆ ಎಂದರು.

ಉದ್ಯೋಗಕ್ಕೆ ಆದ್ಯತೆ:ಪದವೀಧರ ಕ್ಷೇತ್ರದಅಭ್ಯರ್ಥಿ ಹನುಮಂತ ನಿರಾಣಿ ಮಾತನಾಡಿ, ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲು ಕಳೆದ ಆರು ವರ್ಷದಲ್ಲಿ ಆದ್ಯತೆ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ ಎಂದು ಹೇಳಿದರು.

ಜೋಡೆತ್ತು:ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಪೂರ ಮಾತನಾಡಿ, ಮೈಸೂರು ಮಹಾರಾಜರ ಆಳ್ವಿಕೆಯ ಪರಿಣಾಮ ಶಿಕ್ಷಣ, ಅಭಿವೃದ್ಧಿಯಲ್ಲಿ ದಕ್ಷಿಣ ಕರ್ನಾಟಕ ಅಭಿವೃದ್ಧಿ ಆಗಿದೆ. ಅದೇ ರೀತಿ ಸರ್ಕಾರಿ ಪ್ರೌಢಶಾಲೆ, ಕಾಲೇಜು, ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚು ಆರಂಭಕ್ಕೆ ಬಿ.ಎಸ್.ಯಡಿಯೂರಪ್ಪ ಕಾರಣವಾಗಿದ್ದಾರೆ ಎಂದು ತಿಳಿಸಿದರು.

ಶಿಕ್ಷರ ವೇತನ ಹೆಚ್ಚಳ, ಬಡ್ತಿ ಸಿಗಲು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಏಳಿಗೆಗೆ ಬಿಎಸ್ ವೈ ಕಾರಣ. ನೌಕರರ ಪರ, ಶಿಕ್ಷಕರ ಪರ ಬಿಎಸ್ ವೈ ಕಾರ್ಯನಿರ್ವಹಿಸಿದರು ಎಂದರು.

ನಾನು ಮತ್ತು ನಿರಾಣಿ ಅವರು ಪದವೀಧರರ ಮತ್ತು ಶಿಕ್ಷಕರ ಪರವಾಗಿ ಸರ್ಕಾರದ ಮಟ್ಟದಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸಲು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವರಾದ ಅಪ್ಪು ಪಟ್ಟಣಶೆಟ್ಟಿ, ಹನುಮಂತ ನಿರಾಣಿ, ಮುಖಂಡರಾದ ಚಂದ್ರಶೇಖರ ಕವಟಗಿ ಇದ್ದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ತಾವೇಅಭ್ಯರ್ಥಿ ಎಂದುಕೊಂಡು ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನ ಮಾಡಿಸಿದರೆ ಬಿಜೆಪಿ ಗೆಲುವು ನಿಶ್ಚಿತ

– ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ವಾಯವ್ಯ ಪದವೀಧರ, ಶಿಕ್ಷಕ ಕ್ಷೇತ್ರಕ್ಕೆ ಸ್ಪರ್ಧಿಸಿರುವ ನಮ್ಮ ಅಭ್ಯರ್ಥಿಗಳುಜಾಣರು, ಬುದ್ದಿವಂತರು, ಕ್ರಿಯಾಶೀಲರಿದ್ದಾರೆ. ಇವರಿಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹೋಲಿಸಲಾಗದು

– ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

ಪದವೀಧರ ಕ್ಷೇತ್ರದ ಅಭ್ಯರ್ಥಿಹನುಮಂತ ನಿರಾಣಿ50 ಸಾವಿರ ಮತಗಳ ಅಂತರದಿಂದ ಹಾಗೂ ಅರುಣ ಶಹಪೂರ ಅಧಿಕ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ

– ಮುರುಗೇಶ ನಿರಾಣಿ, ಬೃಹತ್‌ ಕೈಗಾರಿಕಾ ಸಚಿವ

ರಾಜ್ಯದಲ್ಲಿ ಚಡ್ಡಿ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಜನರು ಈಗಾಗಲೇ ಕಾಂಗ್ರೆಸ್ ಚಡ್ಡಿ ಬಿಚ್ಚಿದ್ದಾರೆ. ಮುಂಬರುವ ಚುನಾವಣೆಗಳಲ್ಲೂ ಚಡ್ಡಿ ಬಿಚ್ಚಲಿದ್ದಾರೆ

– ರಮೇಶ ಜಿಗಜಿಣಗಿ,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.