ADVERTISEMENT

ಚಡಚಣ: ರಿವಾಲ್ವರ್‌ನಲ್ಲಿ ಆಟ, ಬಾಲಕನಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 14:18 IST
Last Updated 15 ಜೂನ್ 2021, 14:18 IST
ಗುಂಡೇಟಿನಿಂದ ಗಾಯಗೊಂಡ ಬಾಲಕ ಅಭಿಷೇಕನನ್ನು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದೊಯ್ದ ಪೋಷಕರು
ಗುಂಡೇಟಿನಿಂದ ಗಾಯಗೊಂಡ ಬಾಲಕ ಅಭಿಷೇಕನನ್ನು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದೊಯ್ದ ಪೋಷಕರು   

ಚಡಚಣ(ವಿಜಯಪುರ): ಪಟ್ಟಣದ ವಿದ್ಯಾನಗರದಲ್ಲಿ ಮನೆಯೊಂದರ ಲಾಕರ್‌ನಲ್ಲಿಟ್ಟಿದ್ದ ರಿವಾಲ್ವರ್‌ ತೆಗೆದುಕೊಂಡು ಆಟವಾಡುತ್ತಿದ್ದ ಬಾಲಕಗೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಗಾಯಗೊಂಡಿದ್ದಾನೆ.

ಗುಂಡು ತಗುಲಿ ಗಾಯಗೊಂಡ ಬಾಲಕ ಅಭಿಷೇಕ ಸಿದ್ದಾರಾಮ ಗೋಟ್ಯಾಳ(4)ನನ್ನು ವಿಜಯಪುರ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

‘ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತಂಕ ಪಡುವ ಅಗತ್ಯವಿಲ್ಲ‘ ಎಂದು ವೈದ್ಯಾಧಿಕಾರಿ ಡಾ.ಜಾನ್‌ ಕಟವಠೆ ತಿಳಿಸಿದ್ದಾರೆ.

ADVERTISEMENT

ಘಟನೆಯ ವಿವರ: ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಬಾಲಕಅಭಿಷೇಕ ಮನೆಯ ಲಾಕರ್‌ನಲ್ಲಿ ಇಡಲಾಗಿದ್ದ ಲೋಡೆಡ್ ರಿವಾಲ್ವರನ್ನು ತೆಗೆದುಕೊಂಡು ಆಟವಾಡುತ್ತಿರುವಾಗ ಒಂದು ಸುತ್ತು ಗುಂಡು ಹಾರಿದೆ. ಗುಂಡು ಹೊಟ್ಟೆಯ ಕೆಳಭಾಗಕ್ಕೆ ತಗುಲಿ ತೊಡೆಯ ಮೂಲಕ ಹಾದು ಹೋಗಿದೆ.

ಶಬ್ದ ಕೇಳುತ್ತಲೇ ಓಡಿ ಬಂದ ಪಾಲಕರು ಬಾಲಕನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಡಚಣ ಸಿಪಿಐ ಚಿದಂಬರ ಮಡಿವಾಳ, ಘಟನೆಯಲ್ಲಿ ಉಪಯೋಗವಾದ ರಿವಾಲ್ವರ್‌ ಸಿದ್ಧಾರಾಮ ಗೊಟ್ಯಾಳ ಅವರದ್ದಾಗಿದೆ. ಅದು ಲೈಸನ್ಸ್‌ ರಿವಾಲ್ವರ್‌ ಆಗಿದ್ದು, ಸ್ಥಳದಲ್ಲಿ ದೊರೆತ ಗುಂಡಿನ ಕವಚವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.