ADVERTISEMENT

ಸಿಂದಗಿ: ಚಿಕ್ಕದಾದರೂ ಚೊಕ್ಕ ಗಾಂಧಿ ವೃತ್ತ

ಕುಮಸಗಿ ಗ್ರಾಮದಲ್ಲಿ ನಿರ್ಮಾಣ; ಅ.2 ಜಯಂತಿ ಆಚರಣೆ

ಶಾಂತೂ ಹಿರೇಮಠ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
ಸಿಂದಗಿ ತಾಲ್ಲೂಕು ಕುಮಸಗಿ ಗ್ರಾಮದಲ್ಲಿರುವ ಗಾಂಧಿ ವೃತ್ತ
ಸಿಂದಗಿ ತಾಲ್ಲೂಕು ಕುಮಸಗಿ ಗ್ರಾಮದಲ್ಲಿರುವ ಗಾಂಧಿ ವೃತ್ತ   

ಸಿಂದಗಿ: ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಸಮುದಾಯಕ್ಕೆ ಸೀಮಿತವಾದ ಹಲವಾರು ವೃತ್ತ ಮತ್ತು ಪುತ್ಥಳಿಗಳನ್ನು ಕಾಣಬಹುದು. ಆದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ವೃತ್ತ ಮತ್ತು ಪುತ್ಥಳಿಗಳನ್ನು ಕಾಣುವುದು ಅಪರೂಪ. ಇಂತಹ ಅಪರೂಪದ ಸಾಲಿನಲ್ಲಿ ಸೇರಿಕೊಂಡಿದೆ ಕುಮಸಗಿ ಗ್ರಾಮ.

ಸಿಂದಗಿ ಪಟ್ಟಣ ಹೊರತು ಪಡಿಸಿದರೆ ತಾಲ್ಲೂಕಿನಲ್ಲಿರುವ ಎರಡನೇ ಗಾಂಧಿ ವೃತ್ತ ಇದಾಗಿದೆ. ಇವೆರಡೂ ವೃತ್ತಗಳ ನಿರ್ಮಾಣಕ್ಕಾಗಿ ಬೆನ್ನೆಲುಬಾಗಿ ನಿಂತವರು ಶಾಸಕ ಎಂ.ಸಿ.ಮನಗೂಳಿ.

2010ರಲ್ಲಿ ಕುಮಸಗಿ ಗ್ರಾಮದಲ್ಲಿ ಸಮಾನ ಮನಸ್ಕರು ಕೂಡಿಕೊಂಡು ಗಾಂಧಿ ವೃತ್ತದ ಹೆಸರಿನಲ್ಲಿ ತಾತ್ಕಾಲಿಕವಾಗಿ ನಾಮಫಲಕ ಹಾಕಿದ್ದರು. ಅಂದಿನಿಂದ ಗಾಂಧಿ ವೃತ್ತ ಎಂದೇ ಕರೆಯಲಾರಂಭಿಸಿದರು. ಈ ವೃತ್ತ ಪುರ ಪ್ರವೇಶದಲ್ಲಿದೆ. ಎಡಕ್ಕೆ ಬಮ್ಮನಹಳ್ಳಿ ಗ್ರಾಮ, ಬಲಕ್ಕೆ ಸಿಂದಗಿ ರಸ್ತೆ, ಇನ್ನೊಂದು ಬದಿಯಿಂದ ಕಡ್ಲೇವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ.

ADVERTISEMENT

2012ರ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಜಯಂತಿ ದಿನದಂದೇ ಚಿಕ್ಕ ಹಾಗೂ ಚೊಕ್ಕದಾದ ವೃತ್ತ ನಿರ್ಮಾಣವಾಯಿತು. ಅಷ್ಟೇ ಚಿಕ್ಕದಾದ ಗಾಂಧಿ ಪುತ್ಥಳಿಯೂ ಅನಾವರಣಗೊಂಡಿತು.

ಇಂದಿನ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೃತ್ತ ಉದ್ಘಾಟಿಸಿದ್ದರು. ಅಂದಿನ ಮಾಜಿ ಸಚಿವ, ಈಗಿನ ಶಾಸಕ ಎಂ.ಸಿ.ಮನಗೂಳಿ ಅಧ್ಯಕ್ಷತೆ, ಗ್ರಾಮದ ಶಿವಾನಂದ ಶ್ರೀ, ಅಭಿನವ ವೆಂಕಟೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು.

‘ಈ ವೃತ್ತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು ಗ್ರಾಮದ ಶಿವಲಿಂಗಪ್ಪ ಯಾತನೂರ. ಅಂದು, ಮನಗೂಳಿ ಅವರನ್ನು ಭೇಟಿಯಾಗಿ ವೃತ್ತ ಹಾಗೂ ಪುತ್ಥಳಿಗಾಗಿ ಆರ್ಥಿಕ ಸಹಾಯ ಕೇಳಿದರು. ಆಗ ಮನಗೂಳಿ ₹60 ಸಾವಿರ ನೀಡಿದ್ದರು. ಇವರಿಗೆ ಗುರು ಚಾವರ, ಸಂತೋಷ ಚಿಗರಿ, ಉದಯ ತಳವಾರ, ಹಣಮಂತ ಯಾತನೂರ, ವೀರಭದ್ರ ಬಡಿಗೇರ, ಸಿದ್ದು ಬಡಿಗೇರ, ಶರಣು ಹೆರೂರ, ಆನಂದ ಹೆರೂರ ಕೈ ಜೋಡಿಸಿ ವೃತ್ತ ನಿರ್ಮಾಣ ಮಾಡಿದ್ದಾರೆ’ ಎನ್ನುತ್ತಾರೆ ಸಂಜು.

ಚಿಕ್ಕದಾದ ವೃತ್ತವನ್ನು ಇನ್ನುಷ್ಟು ವಿಶಾಲಗೊಳಿಸಿ, ದೊಡ್ಡ ಪುತ್ಥಳಿ ಅನಾವರಣಗೊಳಿಸುವಂತೆ ಮನವಿ ಮಾಡಿದ್ದರಿಂದ, ಮನಗೂಳಿ ಅವರು ಈಗ ಮತ್ತೆ ₹4 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ, 2019ರ ನವೆಂಬರ್ 25 ರಂದು ಭೂಮಿಪೂಜೆ ಕೂಡ ನೆರವೇರಿಸಿದ್ದಾರೆ.

‘ಶಿವಲಿಂಗಪ್ಪ ಯಾತನೂರ ಅಪ್ಪಟ ಗಾಂಧಿ ತತ್ವಾಭಿಮಾನಿ. ಇವರು ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಪ್ರತಿ ವರ್ಷ ಇದೇ ವೃತ್ತದಲ್ಲಿ ಸ್ವಂತ ಖರ್ಚಿನಿಂದ ಆಚರಿಸುತ್ತಾರೆ. ಶಾಲಾ ಮಕ್ಕಳನ್ನು ಕರೆ ತಂದು ಧ್ವಜಾರೋಹಣ ನೆರವೇರಿಸಿ, ಸಿಹಿ ಹಂಚುತ್ತಾರೆ ಎಂದು ಗ್ರಾಮದ ಸಂಜೀವಕುಮಾರ ತಳವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.