ಮುದ್ದೇಬಿಹಾಳ: ಗಣೆಶೋತ್ಸವ ನಿಮಿತ್ತ ಪಟ್ಟಣದ ಬಹುತೇಕ ಮನೆಗಳಲ್ಲಿ 5 ದಿನಗಳ ವರೆಗೆ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಗಳನ್ನು ಭಕ್ತಿಬಾವದಿಂದ ಪೂಜಿಸಿ ಸಂಭ್ರಮದಿಂದ ವಿಸರ್ಜಿಸಲಾಯಿತು.
ಮನೆಯ ಸದಸ್ಯರೆಲ್ಲರೂ 5 ದಿನಗಳ ಕಾಲ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನಿಗೆ ದಿನಂಪ್ರತಿ ವಿವಿಧ ಹೂವುಗಳಿಂದ ಅಲಂಕರಿಸಿ ವಿವಿಧ ತೆರನಾದ ಮೋದಕಗಳನ್ನು, ಲಾಡು, ಹೋಳಿಗೆ, ಪಾಯಸ, ಕರಿಗಡುಬು, ಚಿತ್ರಾನ್ನ, ಅನೇಕ ತೆರನಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.
ಸಂಜೆ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿ, ಹಾಡಿನೊಂದಿಗೆ ಗಣಪತಿ ಬಪ್ಪಾ ಮೋರಯಾ, ಪುಡಚಾ ವರ್ಷಿ ಲವಕರ ಯಾ ಘೋಷಣೆಗಳನ್ನು ಕೂಗುತ್ತಾ ಸಮೀಪದ ತಂಗಡಗಿ ರಸ್ತೆಯಲ್ಲಿರುವ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಹೊರ್ತಿ: ಸಮೀಪದ ಇಂಚಗೇರಿ ಗ್ರಾಮದ ಸದ್ಗುರು ಮಾಧವಾನಂದ ಪ್ರಭುಜಿ ಪ್ರೌಢ ಶಾಲೆಯಲ್ಲಿ ಐದು ದಿನಗಳವರೆಗೆ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ಮೆರವಣಿಗೆ ನಡೆಯಿತು.ಮೆರವಣಿಗೆಯು ಜಿಟಿ, ಜಿಟಿ ಮಳೆಯಲ್ಲೇ ಇಂಚಗೇರಿ ಮಠದ ಆವರಣದಲ್ಲಿರುವ ಸಪ್ತ ಮಹಾರಾಜರ ದೇವಸ್ಥಾನಗಳನ್ನು ಸಂಭ್ರಮದಿಂದ ಪ್ರದಕ್ಷಿಣೆ ನಡೆಸಿ ಮಠದ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಶ್ರೀಮಠದ ನಿವಾಸಿಗರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಳಿಕೋಟೆ: ಶ್ರದ್ಧಾ, ಭಕ್ತಿಯ ಮೆರವಣಿಗೆ
ತಾಳಿಕೋಟೆ: ಪಟ್ಟಣದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ಐದನೆಯ ದಿನವಾದ ಭಾನುವಾರ ಗಣೇಶ ವಿಸರ್ಜನೆಯು ಶ್ರದ್ಧಾಭಕ್ತಿ ಜಿಟಿಜಿಟಿ ಮಳೆಯ ಮಧ್ಯೆಯೇ ನೆರವೇರಿತು. ಅನಂತಪುರ ಪೇಟೆಯಯವರು ಗಣಪತಿ ಮೂರ್ತಿಗಳಿಗೆ ಕೊಡೆಯ ರಕ್ಷಣೆ ಮಾಡಿಕೊಂಡೇ ಗಣಪತಿ ವಿಸರ್ಜಿಸಿದರು.
ಪಟ್ಟಣದ ಬೀದಿಗಳಲ್ಲಿ ಪಟಾಕಿ ಸದ್ದಿನ ಮೊರೆತ, ಭಾಜಾ ಭಜಂತ್ರಿಗಳ ಸ್ವರ ವಾದನ ಕೇಳುತ್ತಿತ್ತು. ಪಟ್ಟಣದ ಹಿಂದು ಸಮುದಾಯಗಳ ಜನರು ತಮ್ಮ ಸಮುದಾಯಗಳೊಂದಿಗೆ ಗುಂಪುಗುಂಪಾಗಿ ಕಾರು, ಬೈಸಿಕಲ್, ದ್ವಿಚಕ್ರವಾಹನ, ಟ್ರ್ಯಾಕ್ಟರ್‌ನಲ್ಲಿ ಕೆಲವರು ತಲೆ ಮೇಲೆ ಹೊತ್ತು ಹೀಗೆ ನಾನಾಬಗೆಯಲ್ಲಿ ಗಣೇಶಮೂರ್ತಿಗಳನ್ನು ಹೊತ್ತು, ಜಯಘೋಷಿಸುತ್ತಾ ಪಟಾಕಿ ಸಿಡಿಸುತ್ತ ವಿಸರ್ಜನೆಗೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು.
ಗಣೇಶ ಮೂರ್ತಿಗಳ ಮುಂದೆ ಪ್ರತಿ ಸಂಜೆಯೂ ಮಕ್ಕಳಿಂದ ಮನರಂಜನೆ, ವಿವಿಧ ಕಾರ್ಯಕ್ರಮಗಳು, ಭಕ್ತಿಯಿಂದ ಮಾಡಿದ್ದ ಅನ್ನಪ್ರಸಾದ ವ್ಯವಸ್ಥೆ ಗಮನ ಸೆಳೆದವು.
ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿ ದೋಣಿ ನದಿಯ ನೆಲಮಟ್ಟದ ಸೇತುವೆ ಮೇಲೆ ಗಣೇಶ ಮೂರ್ತಿಗಳನ್ನು ವಿಸರ್ಜಿಸುವಾಗ ಅಪಾಯಗಳಾಗದಂತೆ ಪುರಸಭೆ ವತಿಯಿಂದ ಬ್ಯಾರಿಕೇಡ್ ನಿರ್ಮಿಸಿದ್ದರು. ಮೂರ್ತಿಗಳನ್ನು ಒಂದು ಬದಿಯಲ್ಲಿ ಸಾಲುಸಾಲಾಗಿ ಕೂಡ್ರಿಸಿ ಪೂಜೆ, ನೈವೇದ್ಯ ಸಲ್ಲಿಸಿ ಕರ್ಪೂರ, ಗಂಧದ ಕಡ್ಡಿ ಬೆಳಗಿ ಕಾಯಿ ಒಡೆದು ಗಣಪ್ಪ ಗಣಪ್ಪ ಮೋರೆಯಾ, ಮಂಗಳ ಮೂರ್ತಿ ಮೋರೆಯಾ ಎನ್ನುವ ಮಂಗಳ ಘೋಷಗಳೊಂದಿಗೆ ನದಿಯಲ್ಲಿ ವಿಸರ್ಜನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.