
ವಿಜಯಪುರ: ‘ಗಂಗಾ–ಕಲ್ಯಾಣ ಯೋಜನೆಗೆ ಸಿದ್ಧರಾಮಯ್ಯ ಸರ್ಕಾರ ಎಳ್ಳು ನೀರು ಬಿಡುವ ಪ್ರಯತ್ನ ಮಾಡುವ ಮೂಲಕ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಂಗಾ ಕಲ್ಯಾಣ ಯೋಜನೆ ರೈತರಿಗೆ ಒಂದು ವರದಾನವಾಗಿತ್ತು, ಬೋರವೆಲ್ ಕೊರೆಯಿಸಲು ಸಾಧ್ಯವಾಗದ ಬಡ ರೈತರು ಈ ಯೋಜನೆ ಮೂಲಕ ಬೋರವೆಲ್ ಕೊರೆಯಿಸಿಕೊಳ್ಳುತ್ತಿದ್ದರು, ಪರಿಣಾಮವಾಗಿ ಪ್ರತಿವರ್ಷ 15 ಸಾವಿರಕ್ಕೂ ಹೆಚ್ಚು ಜನರು ಈ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಯಾಗುತ್ತಿದ್ದರು, ಆದರೆ ರಾಜ್ಯ ಸರ್ಕಾರ ಈ ಯೋಜನೆಗೆ ಆದ್ಯತೆ ನೀಡದೇ ಒಂದು ರೀತಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ದಲಿತ ಪರ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಲಿತರ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿ ವರ್ಷ ಸುಮಾರು 10 ರಿಂದ 12 ಸಾವಿರ ದಲಿತ ರೈತರಿಗೆ ಅನುಕೂಲವಾಗುತ್ತಿದ್ದ ಈ ಯೋಜನೆಗೆ ಆದ್ಯತೆ ನೀಡದೇ ಈ ಎಲ್ಲ ರೈತರನ್ನು ಯೋಜನೆಯಿಂದ ವಂಚಿತರನ್ನಾಗಿಸಿದೆ. ಆ ಮೂಲಕ ಆರ್ಥಿಕವಾಗಿ ದಲಿತರನ್ನು ಇನ್ನೂ ಹಿಂದಕ್ಕೆ ತಳ್ಳುವ ಎಲ್ಲ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರ ನಿರತವಾಗಿದೆ ಎಂದು ಹೇಳಿದರು.
‘ಹಿಂದೆ ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದಾಗ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತಂದಿದ್ದೆ, ರಾಜ್ಯ ಸರ್ಕಾರ ತಮ್ಮ ಪಂಚ ಗ್ಯಾರೆಂಟಿ ಯೋಜನೆಯ ಹಣಕಾಸಿನ ಅಗತ್ಯ ಪೂರೈಸಲು ಗಂಗಾ ಕಲ್ಯಾಣ ಯೋಜನೆ ಹಣವನ್ನು ಉಪಯೋಗಿಸುತ್ತಿದ್ದಾರೆ ಈಗಾಗಲೇ ಸುಮಾರು ₹42,000 ಕೋಟಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಹಾಗೂ ₹187 ಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದೆ’ ಎಂದರು.
‘ಸಣ್ಣ ರೈತರ ಗಂಗಾ ಕಲ್ಯಾಣ ಯೋಜನೆಗೂ ಕೊಡಲಿ ಪೆಟ್ಟು ನೀಡಿದೆ, 2023-24ರಲ್ಲಿ ಕೇವಲ 4000 ಕೊಳವೆ ಬಾವಿಗಳನ್ನು ಕೊರೆದರೆ, 2024-25ರಲ್ಲಿ ಕೇವಲ 3000 ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಯಿಸಲಾಗಿದೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖ ಮಾಡಿ ಯೋಜನೆಯನ್ನೇ ಬಂದ್ ಮಾಡುವ ಹುನ್ನಾರದಲ್ಲಿದೆ’ ಎಂದು ಸಂಸದ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.