
ರಿಷಿ ಆನಂದ್
ವಿಜಯಪುರ: ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ವಿಷಯಗಳ ಪಠ್ಯಕ್ರಮ ಪೂರ್ಣಗೊಳಿಸಿ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ, ಉತ್ತರ ಬರೆಸುವ ಮೂಲಕ ದಾಖಲೆಗಳನ್ನು ನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ, ಶಿಕ್ಷಕರಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆ ಸಭೆಯಲ್ಲಿ ಮಾತನಾಡಿದ ಅವರು, ಜನವರಿಯಲ್ಲಿ ಎಲ್ಲಾ ವಿಷಯಗಳ ಪಾಠಗಳನ್ನು ಶಿಕ್ಷಕರು ಪುನರ್ ಬೋಧನೆ ಮಾಡಬೇಕು. ಮಹತ್ವದ ಕಲಿಕಾ ಅಂಶಗಳನ್ನು ಮಕ್ಕಳಿಗೆ ಪುನರ್ ಮನನ ಮಾಡಿಸಬೇಕು. ರಸಪ್ರಶ್ನೆ ಕಾರ್ಯಕ್ರಮ, ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳ ಬರಹಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿದಿನ ಶಾಲೆಗೆ ಭೇಟಿ ನೀಡಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಮೇಲುಸ್ತುವಾರಿ ವಹಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ, ಗುಂಪು ಅಧ್ಯಯನಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು. ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕನ್ನಡ, ಇಂಗ್ಲೀಷ್, ವಿಜ್ಞಾನ ಬೋಧನೆ ಮಾಡುತ್ತಿದ್ದರೆ ಬೇರೆ ಬೇರೆ ಶಾಲೆಗಳ ಶಿಕ್ಷಕರಿಂದ ವಿಶೇಷ ತರಗತಿ ಆಯೋಜನೆ ಮಾಡಲು ತಿಳಿಸಿದರು.
ಬುನಾದಿ ಸಾಕ್ಷರತೆ ಮತ್ತು ಗಣಿತದ ಮೂಲ ಕಲಿಕೆಯ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಡಿಡಿಪಿಐ ಸೇರಿದಂತೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.