ADVERTISEMENT

ತಾಳಿಕೋಟೆ: ಮೂಲ ಸೌಕರ್ಯ ವಂಚಿತ ಗೋಟಖಿಂಡ್ಕಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 5:36 IST
Last Updated 5 ಮಾರ್ಚ್ 2025, 5:36 IST
ತಾಳಿಕೋಟೆ ತಾಲ್ಲೂಕಿನ ಗೋಟಖಿಂಡ್ಕಿ ಗ್ರಾಮದ ಮುಖ್ಯ ರಸ್ತೆ ಹಾಳಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ಮಾಡಿದ ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿದೆ
ತಾಳಿಕೋಟೆ ತಾಲ್ಲೂಕಿನ ಗೋಟಖಿಂಡ್ಕಿ ಗ್ರಾಮದ ಮುಖ್ಯ ರಸ್ತೆ ಹಾಳಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ಮಾಡಿದ ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿದೆ   

ತಾಳಿಕೋಟೆ: ಮಹಿಳೆಯರಿಂದಲೇ ಎಳೆಯಲ್ಪಡುವ ಶ್ರೀಮನ್ ದೇವಿಯ ರಥೋತ್ಸವಕ್ಕೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ಗೋಟಖಿಂಡ್ಕಿ ಗ್ರಾಮವು ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 600 ಮನೆಗಳು, 1,800 ಮತದಾರರನ್ನು ಹೊಂದಿರುವ ಗ್ರಾಮವು ಕೃಷಿಯನ್ನೇ ನೆಚ್ಚಿಕೊಂಡಿದೆ. ಬೆಳಿಗ್ಗೆ ಕೃಷಿ ಜೀವನಕ್ಕೆ ಹೋಗುವ ರೈತಾಪಿ ಕುಟುಂಬಗಳಿಗೆ ಬಹುಕಾಲದಿಂದ ಇದ್ದ ಕುಡಿಯುವ ನೀರಿನ ಸಮಸ್ಯೆ ಈಗಿಲ್ಲ. ಭಂಟನೂರ ರಸ್ತೆಯಲ್ಲಿ ಮಿಲಿಟರಿ ರಾಮನಗೌಡರು ಗ್ರಾಮದ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲೆಂದು ತಮ್ಮ ಜಮೀನಿನಲ್ಲಿಯೇ ಕೊಳವೆಬಾವಿ ತೋಡಲು ಅವಕಾಶ ನೀಡಿದ್ದಲ್ಲದೇ ಆ ಕೊಳವೆಬಾವಿ ಇರುವ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಟ್ಟಿದ್ದಾರೆ. ಹೇರಳವಾಗಿ ನೀರು ಲಭ್ಯವಾಗಿದೆ. ಆದರೆ ‘ದೇವರು ವರಕೊಟ್ಟರೂ ಪೂಜಾರಿ ವರ ಕೊಡ’ ಎನ್ನುವಂತೆ ಜನತೆಗೆ ನೀರು ಪೂರೈಕೆ ಸಮರ್ಪಕವಾಗಿಲ್ಲ ಎನ್ನುವುದು ಜನತೆಯ ಅಳಲು.

‘ಬಹುಹಳ್ಳಿ ಯೋಜನೆ ನೀರಿಲ್ಲರೀ, ಹಳ್ಳದಬಳಿ ಬಾವಿ ತೋಡಿದ್ದಾರೆ ಮಿಲಿಟರಿ ರಾಮನಗೌಡ್ರು ಜಾಗಾ ಬಿಟ್ಟು ಪುಣ್ಯ ಕಟ್ಟಿಕೊಂಡರು. ಆದರೆ, ವಾರಕ್ಕೊಮ್ಮೆ ನೀರು ಬಿಡತಾರ.. ಯಾಕಂತ ಕಾರಣ ಕೇಳಿದ್ರೆ ಪೈಪು ಒಡದಾವ, ಸಿಬ್ಬಂದಿಗೆ ಪಗಾರ ಕೊಟ್ಟಿಲ್ಲ ಅಂತಾರ. ಬ್ಯಾಸಿಗಿ ಬಂತು.. ದನಕರಾ, ಜನಕ್ಕ ವ್ಯಾಳೆಕ ಸಾಕಷ್ಟು ನೀರು ಸಿಗುವಂಗ ಆಗಬೇಕ್ರಿ, ಯಾರಿಗೆ ಹೇಳಿ ಪ್ರಯೋಜನ ಏನು, ನೀರು ಈಗ ಸಾಕಷ್ಟೈತಿ ಆದ್ರೆ ನಮಗೆ ಬೇಕಾದಾಗ ಬರುವಲ್ದು’ ಎಂದು ಗ್ರಾಮಸ್ಥರಾದ ಭೀಮನಗೌಡ ಬಿರಾದಾರ, ಮಹಾದೇವಪ್ಪಗೌಡ ಬಿರಾದಾರ, ದೇವು ಗೊಟಗುಣಕಿ ಅವಲತ್ತುಕೊಂಡರು.

ADVERTISEMENT

ಮಹಿಳೆಯರೇ ಹಣ ಸೇರಿಸಿ ಗ್ರಾಮದ ಮಹಾದೇವಿಗೆ ರಥ ಮಾಡಿಸಿಕೊಟ್ಟು ರಥವನ್ನೂ ತಾವೇ ಎಳೆಯುವ ಗೌರವ ಪಡೆದ ಗ್ರಾಮವಿದು. ಇಂದು ಆ ಮಹಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಯೂ ಹಾಳಾಗಿದ್ದು, ಗುಂಡಿಗಳಿಂದ ತುಂಬಿ ಮನೆ ಬಳಕೆ ನೀರು ತುಂಬಿ ರಸ್ತೆಯಲ್ಲಿ ಸಾಗುವವರಿಗೆ ಸವಾಲೊಡ್ಡುತ್ತಿವೆ.

‘ಗ್ರಾಮದಲ್ಲಿ ಮುಖ್ಯರಸ್ತೆಯಾದಿಯಾಗಿ ಹಲವೆಡೆ ರಸ್ತೆಗಳು ಹಾಳಾಗಿವೆ. ಬಂಟನೂರ ರಸ್ತೆಯಲ್ಲಿನ ಎಸ್.ಸಿ.ಕಾಲೊನಿಯಲ್ಲಿನ ರಸ್ತೆ ಬೀರಲಿಂಗೇಶ್ವರ ದೇವಸ್ಥಾನದ ಹಿಂದಿನ ರಸ್ತೆ ಸಿಸಿ ರಸ್ತೆಯಾಗಬೇಕು. ಸರಿಯಾಗಿ ನೀರು ಹೋಗಲು ಚರಂಡಿಯೂ ಬೇಕು. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ನೀರು ರಸ್ತೆ ತುಂಬ ಹರಿದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ ಮಹಿಳೆಯರು, ವಯಸ್ಸಾದವರು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಊರಾಗ ದೊಡ್ಡ ಜಾತ್ರಿಯಾಗತ್ತ ಅಮ್ಮನ ದರ್ಶನಕ ನೂರಾರು ಜನ ಬರ್ತಾರ, ಅವರು ಏನೆಲ್ಲ ಬೈದುಕೊಳ್ತಾರೋ ನಮ್ಮೂರಿನ ಬಗ್ಗೆ’ ಎಂಬ ಕೊರಗು ಜನರದ್ದು.

‘ಊರಾಗ ಸರ್ಕಾರಿ ಶಾಲೆ ಚೆನ್ನಾಗಿ ನಡೆದಿದೆ. ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಲ್ಲಿ ನಾಲ್ಕು ಕೋಣೆಗಳು ಶಿಥಿಲಾವಸ್ಥೆ ತಲುಪಿವೆ. ಅದರಲ್ಲಿ ಎರಡು ಕೋಣೆಗಳಲ್ಲಿ ಮಕ್ಕಳನ್ನು ಕೂಡಿಸುವುದೇ ಇಲ್ಲ. ಅಪಾಯಕಾರಿಯಾಗಿವೆ ಅವುಗಳ ದುರಸ್ತಿ ಮಾಡಿಸಬೇಕಿದೆ. ಶಾಸಕರೂ ಶಾಲೆಗೆ ಭೇಟಿ ನೀಡಿ ನೆರವಿನ ಭರವಸೆ ಕೊಟ್ಟಿದ್ದಾರೆ ಆದರೂ ಬೇಗ ಕೆಲಸವಾದರೆ ಒಳ್ಳೆಯದಾಗುತ್ತದೆ’ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಕೋಳ್ಯಾಳ ಮನವಿ ಮಾಡಿದರು.

ತಾಳಿಕೋಟೆ ತಾಲ್ಲೂಕಿನ ಗೋಟಖಿಂಡ್ಕಿ ಗ್ರಾಮದ ಮುಖ್ಯ ರಸ್ತೆ ಹಾಳಾಗಿದ್ದು ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ಮಾಡಿದ ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿದೆ
ಎಸ್ಸಿ ಕಾಲೊನಿ ಕನಕದಾಸ ಕಾಲೊನಿಯಲ್ಲಿ ಸಿಸಿ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದಾಗಿದೆ ಊರಿನ ಪ್ರಮುಖ ರಸ್ತೆಗಳಂತೂ ಚರಂಡಿ ನೀರಿನಿಂದ ಗಬ್ಬೆದ್ದು ನಾರುತ್ತಿವೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ 
ಗುರುಪ್ರಸಾದ್ ಬಿ.ಜಿ. ಯುವ ಮುಖಂಡ
ಗೋಟಖಿಂಡ್ಕಿ ಗ್ರಾಮಕ್ಕೆ ಈಗ ಕುಡಿಯುವ ನೀರಿನ ಸಮಸ್ಯೆಯಿಲ್ಲ. ವಿತರಣೆಯ ಲೋಪ ಸರಿಪಡಿಸಲಾಗುವುದು. ಕ್ರಿಯಾಯೋಜನೆಯಲ್ಲಿಟ್ಟು ರಸ್ತೆ ಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು
ಶಂಕರ ದಳವಾಯಿ ಪಿಡಿಒ ಭಂಟನೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.