ADVERTISEMENT

ವಿಜಯಪುರ | ವೈದ್ಯಕೀಯ ಕಾಲೇಜು ಸ್ಥಾಪನೆ: ಖಾಸಗಿ ಲಾಬಿಗೆ ಮಣಿಯಿತೇ ಸರ್ಕಾರ?

ಬಸವರಾಜ ಸಂಪಳ್ಳಿ
Published 6 ಸೆಪ್ಟೆಂಬರ್ 2025, 5:54 IST
Last Updated 6 ಸೆಪ್ಟೆಂಬರ್ 2025, 5:54 IST
ಸಿ.ಎಸ್.ನಾಡಗೌಡ ಅಪ್ಪಾಜಿ
ಸಿ.ಎಸ್.ನಾಡಗೌಡ ಅಪ್ಪಾಜಿ   

ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬುದು ಎರಡು ದಶಕಗಳ ಬೇಡಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಮುಂದಾಗಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ವಿಧಾನಸಭಾ ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹೇಳಿದ್ದಾರೆ. ಸಚಿವರ ಹೇಳಿಕೆಯಿಂದ ಉತ್ತೇಜಿತರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ‘ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದಾದರೆ ₹500 ಕೋಟಿ ಹೂಡಿಕೆ ಮಾಡುತ್ತೇನೆ’ ಎಂದು ಸದನದಲ್ಲೇ ಹರಾಜು ಕೂಗಿದ್ದಾರೆ. 

ರಾಜ್ಯ ಸರ್ಕಾರ ಖಾಸಗಿ ಲಾಬಿಗೆ ಮಣಿದಿದೆ. ಸ್ವತಃ ಮುಖ್ಯಮಂತ್ರಿ ಹಾಗೂ ಜಿಲ್ಲೆಯ ಪ್ರಭಾವಿ ಸಚಿವರು ವಿಜಯಪುರದ ಖಾಸಗಿ ಸಂಸ್ಥೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ADVERTISEMENT

ಪಿಪಿಪಿ ಮಾದರಿಗೆ ಜಿಲ್ಲೆಯ ವಿವಿಧ ವಿದ್ಯಾರ್ಥಿ, ಪ್ರಗತಿಪರ, ದಲಿತ, ರೈತ, ಕನ್ನಡ ಪರ ಹಾಗೂ ಎಡ ಪಕ್ಷ ಹಾಗೂ ಬಿಜೆಪಿ, ಎಎಪಿ ತೀವ್ರ ವಿರೋಧ ದಾಖಲಿಸಿವೆ. ಅಲ್ಲದೇ, ಪಕ್ಷಾತೀತವಾದ ಹೋರಾಟ ಸಮಿತಿಯೂ ರಚನೆಯಾಗಿ, ಒಂದು ವಾರದಿಂದ ಧರಣಿ, ಹೋರಾಟ, ಪ್ರತಿಭಟನೆಗಳು ನಡೆದಿವೆ.

ರಾಜಕೀಯ ವಾಗ್ವಾದ:

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ಒಗ್ಗಟ್ಟು ತೋರಿಸಬೇಕಿದ್ದ ಜಿಲ್ಲೆಯ ಶಾಸಕರು, ಸಚಿವರು ರಾಜಕೀಯ ವಾಗ್ವಾದಕ್ಕೆ ಸೀಮಿತವಾಗಿದ್ದಾರೆ.

ಸಚಿವ ಶಿವಾನಂದ ಪಾಟೀಲ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಸಚಿವರ ಹೇಳಿಕೆಯನ್ನು ಕೆಲವು ಮಾಧ್ಯಮಗಳೇ ರಾಜಕೀಯಗೊಳಿಸಿ, ಸಚಿವರ ನಡುವೆ ಜಗಳ ಹಚ್ಚುವ ಕೆಲಸ ಮಾಡಿವೆ. ಇದರಿಂದ ಜಿಲ್ಲೆಯ ಹಿತಾಸಕ್ತಿಗೆ ಏಟು ಬಿದ್ದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಶಿವಾನಂದ ಪಾಟೀಲರ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. 

ಖಾಸಗಿ ಕಾಲೇಜು ಸ್ಥಾಪನೆಗಾಗಿ ಕೋಟಿ, ಕೋಟಿ ಹಣವನ್ನು ಹಿಡಿದುಕೊಂಡು ಕಾಯುತ್ತಿರುವ  ಶಾಸಕ ಯತ್ನಾಳ ಅವರು ಶಿವಾನಂದ ಪಾಟೀಲರ ವಿರುದ್ಧ ಮುಗಿ ಬಿದ್ದಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿ ಅವರೇಕೆ ವೈದ್ಯಕೀಯ ಕಾಲೇಜು ಸ್ಥಾಪಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಖಾಸಗಿಯಾಗಲಿ ಅಥವಾ ಸರ್ಕಾರಿಯಾಗಲಿ ಯಾರಿಗೂ ಉಚಿತ ಶಿಕ್ಷಣ ನೀಡಲ್ಲ ಎಂದಿದ್ದಾರೆ. ಹೋರಾಟಗಾರ ನೈತಿಕತೆಯನ್ನೂ ಪ್ರಶ್ನಿಸಿದ್ದಾರೆ. 

ಇಷ್ಟಾದರೂ ಜಿಲ್ಲೆಯ ಇನ್ನುಳಿದ ಹಾಲಿ, ಮಾಜಿ ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕೊಸರಾಡುತ್ತಿದ್ದಾರೆ. ಜನಪರ ನಿಲುವು ಯಾರಲ್ಲೂ ಕಾಣಿಸುತ್ತಿಲ್ಲ. ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 

ಸೆಪ್ಟೆಂಬರ್‌ 6ರಂದು ಆಲಮಟ್ಟಿಗೆ ಬರುತ್ತಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸರ್ಕಾರದ ನಿಲುವನ್ನು ಜನತೆಗೆ ತಿಳಿಸಬೇಕಿದೆ. ಜನಪರವಾಗಿ ನಿಲ್ಲುತ್ತಾರೋ ಅಥವಾ ಖಾಸಗಿ ಲಾಬಿಗೆ ಮಣೆ ಹಾಕುತ್ತಾರೋ ಅಥವಾ ಅಡ್ಡಗೋಡೆ ಮೇಲೆ ದೀಪ ಇಟ್ಟು ಹೋಗುತ್ತಾರೋ ಕಾದು ನೋಡಬೇಕಿದೆ. 

ಅಶೋಕ ಮನಗೂಳಿ
ಸರ್ಕಾರಿ ವೈದ್ಯಕೀಯ ಕಾಲೇಜು ಅಥವಾ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಈ ಬಗ್ಗೆ ಅಧ್ಯಯನ ಮಾಡಿ ಬಳಿಕ ಮಾತನಾಡುವೆ.
-ಅಶೋಕ ಮನಗೂಳಿ ಶಾಸಕ ಸಿಂದಗಿ
ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಸರ್ಕಾರದಲ್ಲಿ ಚರ್ಚೆ ಆಗಿಲ್ಲ. ನಮಗೆ ಏನೂ ವಿಷಯ ಗೊತ್ತಿಲ್ಲ. ಜಿಲ್ಲೆಯ ಇಬ್ಬರು ಸಚಿವರೂ ಚರ್ಚಿಸಿಲ್ಲ. ಸರ್ಕಾರಿ ಕಾಲೇಜು ಸ್ಥಾಪನೆಗೆ ತೊಂದರೆ ಏನಿದೆ? ಜಿಲ್ಲಾ ಸಭೆ ಕರೆದಾಗ ಚರ್ಚಿಸುತ್ತೇನೆ. 
-ಸಿ.ಎಸ್‌.ನಾಡಗೌಡ ಅಪ್ಪಾಜಿ ಶಾಸಕ ಮುದ್ದೇಬಿಹಾಳ
ವಿಠಲ ಕಟಕಧೋಂಡ
ಜಿಲ್ಲೆಯಲ್ಲಿ ಈಗಾಗಲೇ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಜಿಲ್ಲೆಯ ಜನರ ಅಭಿಪ್ರಾಯದಂತೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸುವುದು ಸೂಕ್ತ. ಜಿಲ್ಲೆಯ ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ
- ರಾಜುಗೌಡ ಪಾಟೀಲ ಶಾಸಕ ದೇವರಹಿಪ್ಪರಗಿ
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆದರೆ ಬಡವರಿಗೆ ಅನುಕೂಲವಾಗಲಿದೆ. ರಾಜ್ಯದ  ಗಡಿಭಾಗವಾದ ಚಡಚಣ ಕ್ಷೇತ್ರದಲ್ಲೇ ಆಗಬೇಕು. ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಯಾವುದೇ ಕಾರಣಕ್ಕೂ ಬೇಡ. 
–ವಿಠಲ ಕಟಕಧೋಂಡ ಶಾಸಕ ನಾಗಠಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.