
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಪ್ರಮುಖರು ಸಚಿವ ಎಂ.ಬಿ.ಪಾಟೀಲ ಅವರನ್ನು ಭಾನುವಾರ ಭೇಟಿ ಮಾಡಿ, ಮುಖ್ಯಮಂತ್ರಿಗಳ ಜೊತೆ ನಿಯೋಗ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದರು.
‘ಕಳೆದ 60 ದಿನಗಳಿಂದ ಸತತ ಹೋರಾಟ ನಡೆಯುತ್ತಿದೆ. ಸರ್ಕಾರದಿಂದ ಈವರೆಗೂ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣದ ಸಕಾರಾತ್ಮಕ ಆದೇಶ ಹೊರಬಂದಿಲ್ಲ’ ಎಂದು ಸಮಿತಿ ಪದಾಧಿಕಾರಿಗಳು ಸಚಿವರ ಬೇಸರ ವ್ಯಕ್ತಪಡಿಸಿದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ನಿಮ್ಮ ಬೇಡಿಕೆಯನ್ನು ಈಗಾಗಲೇ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತಂದಿರುವೆ. ನ.19ರಂದು ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ನಿಗದಿ ಮಾಡುವ ಭರವಸೆ ನೀಡಿದರು.
ಹೋರಾಟ ಸಮಿತಿಯ ಸದಸ್ಯ ಭಗವಾನ್ ರೆಡ್ಡಿ, ಅರವಿಂದ್ ಕುಲಕರ್ಣಿ, ಅಕ್ರಮ ಮಾಶಾಳ್ಕರ್, ಅಪ್ಪಸಾಹೇಬ್ ಯರನಾಳ, ಮಲ್ಲಿಕಾರ್ಜುನ್ ಬಟಗಿ, ಲಲಿತಾ ಬಿಜ್ಜರಗಿ, ಗಿರೀಶ್ ಕಲಘಟಗಿ, ಲಕ್ಷ್ಮಣ ಕಂಬಾಗಿ, ಭರತಕುಮಾರ್ ಎಚ್., ಸಿದ್ದಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಭೋಗೇಶ್ ಸೋಲಾಪುರ್, ಸಿದ್ರಾಮ್ ಹಿರೇಮಠ, ಮಲ್ಲಿಕಾರ್ಜುನ್ ಎಚ್.ಟಿ, ಭೀಮು ಉಪ್ಪಾರ, ಬಾಳು ಜೇವೂರ್, ಸಿದ್ದರಾಮ್ ಹಳ್ಳುರ್ ಇದ್ದರು.
ರಂಗೋಲಿ ಚಳವಳಿ
ವಿಜಯಪುರ: ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಕಳೆದ 60 ದಿನಗಳಿಂದ ನಡೆಯುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ರಂಗೋಲಿ ಚಳವಳಿ ನಡೆಸಲು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ನಿರ್ಧರಿಸಿದೆ. ನವೆಂಬರ್ 18 ವಿಜಯಪುರ ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನವೆಂಬರ್ 19ರಂದು ಗ್ರಾಮೀಣ ಭಾಗದಲ್ಲಿ ರಂಗೋಲಿ ಚಳವಳಿ ನಡೆಯಲಿದೆ. ವಿಜಯಪುರ ನಗರದಲ್ಲಿ ಒಟ್ಟು 25 ಸ್ಥಳಗಳಲ್ಲಿ ಮತ್ತು 6 ತಾಲ್ಲೂಕಿನ ಹಲವು ಕಡೆಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.