ಇಂಡಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪಾಲಕರೇ ಹೆಚ್ಚು. ಇಂದು ಹೆಚ್ಚು ಹೆಚ್ಚು ಶುಲ್ಕ ಇರುವ ಶಾಲೆಗಳಿಗೆ ಹೆಚ್ಚಿನ ಮಾನ್ಯತೆ ಉಂಟಾಗಿದೆ. ಹೆಚ್ಚು ಶುಲ್ಕ ಪಡೆದರೆ ಗುಣಮಟ್ಟದ ಶಿಕ್ಷಣವಿದೆ ಎಂದು ತಿಳಿಯುವ ಇಂದಿನ ಪಾಲಕರಿಗೆ ಇಂಡಿ ತಾಲ್ಲೂಕಿನ ನಾದ (ಕೆ.ಡಿ) ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಒಮ್ಮೆ ಬಂದು ನೋಡಿ. ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.
ಈ ಶಾಲೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರ ಹೆಚ್ಚಿನ ಪರಿಶ್ರಮದ ಫಲವಾಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಆಟಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೀತಿ ಪಾಠ ಬೋಧನೆ, ಪರಿಸರ ಜ್ಞಾನ, ವಿಜ್ಞಾನ ಪ್ರಯೋಗ, ಉತ್ತಮ ಗ್ರಂಥಾಲಯ ಇವಲ್ಲದೇ ಶಾಲೆಯ ಆವರಣ ತುಂಬಾ ನೆಟ್ಟಿರುವ ಗಿಡಗಳು ಹೆಮ್ಮರವಾಗಿ ಬೆಳೆದಿದ್ದು, 15 ವರ್ಷಗಳಿಂದ ಶಾಲೆಯ ಆವರಣ ಮಲೆನಾಡಿನ ಶಾಲೆಗಳಂತೆ ಕಂಗೊಳಿಸುತ್ತಿದೆ. ಮಕ್ಕಳ ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿ ಶಾಲಾ ಆವರಣದಲ್ಲಿಯೇ ಬೆಳೆಯತ್ತಾರೆ.
ಈ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪ್ರಸಕ್ತ ವರ್ಷ ಶಿಕ್ಷಣ ಇಲಾಖೆ ಅಂದಾಜು ₹2 ಲಕ್ಷ ಮೌಲ್ಯದ ಡಿಜಿಟಲ್ ಬೋರ್ಡ್ ಕೊಡುಗೆ ನೀಡಲಿದ್ದು, ಅದನ್ನು ಬಳಸಿಕೊಂಡು ತಂತ್ರಜ್ಞಾನ ಆಧಾರಿತ ಗುಣಾತ್ಮಕ ಶಿಕ್ಷಣ ನೀಡಲಾಗುವುದು ಎನ್ನುತ್ತಾರೆ ಅಲ್ಲಿಯ ಮುಖ್ಯ ಶಿಕ್ಷಕ ಸಿ.ಎಂ.ಬಂಡಗರ.
ಶಾಲಾ ಆವರಣದಲ್ಲಿ ನಾನಾಬಗೆಯ ಗಿಡಗಳು ಬೆಳೆದು ಉತ್ತಮ ಪರಿಸರ ರೂಪಗೊಳ್ಳಲು ಶಾಲೆಯ ಶಿಕ್ಷಕ ವೃಂದದ ಪರಿಶ್ರಮವೇ ಕಾರಣವಾಗಿದೆ. ಮಕ್ಕಳು ಶಾಲೆಯ ಆವರಣದಲ್ಲಿ ಕಾಲಿಟ್ಟರೆ ಮಲೆನಾಡಿನ ಅನುಭವ ಅವರಿಗೆ ಆಗುತ್ತಿದೆ.
’ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಶೈಕ್ಷಣಿಕ ಪ್ರಗತಿ ಸಾಧಿಸಲು ಗ್ರಾಮಸ್ಥರು, ಗ್ರಾಮ ಪಂಚಾಯತಿ, ಶಿಕ್ಷಣ ಇಲಾಖೆ ಮತ್ತು ಶಾಸಕರ ಸಹಕಾರವೇ ಕಾರಣ’ ಎನ್ನುತ್ತಾರೆ ಜನರು ಹಾಗೂ ವಿದ್ಯಾರ್ಥಿಗಳ ಪೋಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.