ADVERTISEMENT

ಜಾತಿ ಗಣತಿ ಕೈಬಿಡಿ: ಸಂಸದ ಗೋವಿಂದ ಕಾರಜೋಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 13:21 IST
Last Updated 21 ಸೆಪ್ಟೆಂಬರ್ 2025, 13:21 IST
<div class="paragraphs"><p>ಗೋವಿಂದ ಕಾರಜೋಳ </p></div>

ಗೋವಿಂದ ಕಾರಜೋಳ

   

ವಿಜಯಪುರ:‌ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮವನ್ನು ಒಡೆಯಲು ಹಾಗೂ ತನ್ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಸಮೀಕ್ಷೆ ನಿಲ್ಲಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬ್ರಿಟಿಷರು ಸೇರಿದಂತೆ ಬೇರೆ-ಬೇರೆಯವರು 600 ವರ್ಷ ಆಳ್ವಿಕೆ ನಡೆಸಿದ್ದಾರೆ. ಆದರೆ, ಯಾರೂ ಹಿಂದೂ ಧರ್ಮಕ್ಕೆ ಕೈಹಾಕಿರಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಹೆಸರಲ್ಲಿ ಹಿಂದೂ ಧರ್ಮಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.

ADVERTISEMENT

ಇದೇ ಜಾತಿಗಣತಿ ಬಗ್ಗೆ ಇತ್ತೀಚೆಗೆ ಸಿದ್ದರಾಮಯ್ಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಾಲ್ವರು ಸಚಿವರನ್ನು ಹೊರತುಪಡಿಸಿ, ಉಳಿದೆಲ್ಲ ಸಚಿವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ. ಆದರೆ, ವಿರೋಧಿಸಿದ ಸಚಿವರ ಹೆಸರನ್ನು ರಾಹುಲ್, ಸೋನಿಯಾ ಗಾಂಧಿಗೆ ರವಾನಿಸಿ, ನಿಮ್ಮನ್ನು ಮಂತ್ರಿಮಂಡಲದಿಂದ ವಜಾ ಮಾಡುವುದಾಗಿ ಬೆದರಿಸಲಾಗಿದೆ. ಇಂತಹ ದುರಾಡಳಿತ ಬ್ರಿಟಿಷರ ಕಾಲದಲ್ಲೂ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕ್ರೈಸ್ತ ಹಿಂದೂ, ಕ್ರೈಸ್ತ ಮಾದಿಗ, ಕ್ರೈಸ್ತ ಪಂಚಮಸಾಲಿ, ಕ್ರೈಸ್ತ ಗಾಣಿಗ, ಕ್ರೈಸ್ತ ಲಂಬಾಣಿ ಎಂಬ ಜಾತಿಗಳು ಎಲ್ಲಿಂದ ಬಂದಿವೆ?  ಒಬ್ಬ ವ್ಯಕ್ತಿ ಧರ್ಮಾಂತರಗೊಂಡರೆ, ಹಿಂದಿನ ಧರ್ಮದ ಪೂರ್ವಾಶ್ರಮದ ಎಲ್ಲ ಸಂಬಂಧ ಕಡಿದುಕೊಳ್ಳುತ್ತದೆ. ಮತಾಂತರಗೊಂಡ ದಿನದಿಂದಲೇ ಹಿಂದೂ ಸಮಾಜಕ್ಕೆ ಸಂಬಂಧವಿರಲಿಲ್ಲ. ಇದರ ಪರಿಜ್ಞಾನವೂ ಇಲ್ಲವೇ?  ಇದಲ್ಲದೇ, ಜೈನ ಪಂಚಮಸಾಲಿ ಎಂಬ ಹೊಸ ಜಾತಿಯನ್ನೇ ಸೃಷ್ಟಿಸಿರುವುದು ಆಶ್ಚರ್ಯ ತಂದಿದೆ. ಹೀಗಾಗಿ ಬಡವರಿಗೆ ಮಾಡುವ ಮೋಸದಾಟವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಜಾತಿ ಗಣಿತಿ ಹಿಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾರ್ಗದರ್ಶನ ಇದ್ದು, ಅವರ ತಾಳಕ್ಕೆ ತಕ್ಕಂತೆ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ.  ಭಾರತವನ್ನು ಕ್ರಿಶ್ಚಿಯನ್‌ಮಯ ಮಾಡುವ ಹುನ್ನಾರ ಇದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಉಮೇಶ ಕಾರಜೋಳ, ಸಂಜಯ ಪಾಟೀಲ ಕನಮಡಿ, ರವೀಂದ್ರ ಲೋಣಿ, ಸ್ವಪ್ನಾ ಕಣಮುಚನಾಳ, ಶಿಲ್ಪಾ ಕುದರಗೊಂಡ, ವಿಜಯ ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.