ADVERTISEMENT

ವಿಜಯಪುರ: ಗುಮ್ಮಟನಗರಿಯಲ್ಲಿ ಗಣೇಶೋತ್ಸವ ಸಂಭ್ರಮ

ಸಿದ್ಧಿ ವಿನಾಯಕನಿಗೆ ಶ್ರದ್ಧೆ, ಭಕ್ತಿಯ ನಮನ, ಮೆರವಣಿಗೆ ನಡೆಸಿ ಮೂರ್ತಿಗಳ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 14:21 IST
Last Updated 19 ಸೆಪ್ಟೆಂಬರ್ 2023, 14:21 IST
ವಿಜಯಪುರ ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಭಕ್ತರು ಗಣೇಶನ ಮೂರ್ತಿಗಳನ್ನು ಕೊಂಡೊಯ್ದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಭಕ್ತರು ಗಣೇಶನ ಮೂರ್ತಿಗಳನ್ನು ಕೊಂಡೊಯ್ದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಗಣೇಶೋತ್ಸವವನ್ನು ಭಕ್ತಿಭಾವ, ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು.

ಮಾರುಕಟ್ಟೆಯಿಂದ ಬೆಳಿಗ್ಗೆಯೇ ಗಣಪನ ಮೂರ್ತಿಗಳನ್ನು ತಂದು ಮನೆ, ಮನೆಗಳಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಬಗೆಬಗೆಯ ಭಕ್ಷ್ಯ, ಭೋಜನ, ಸಿಹಿ ತಿನಿಸು, ನೈವೇದ್ಯವನ್ನು ವಿಘ್ನ ನಿವಾರಕನಿಗೆ ಸಮರ್ಪಿಸಿದರು.

ದೇವಸ್ಥಾನ, ಶಾಲಾ–ಕಾಲೇಜು, ಸಂಘ–ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ಬೃಹತ್‌ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು. ದಿನವಿಡೀ ನಡೆದ ಮೆರವಣಿಗೆ ವೇಳೆ ಡಿಜೆ ಆರ್ಭಟಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಗುಲಾಲ್‌ ಎರಚಿ ಸಂಭ್ರಮಿಸಿದರು. ಮಕ್ಕಳು, ಯುವಕರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ADVERTISEMENT

ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೈವಿಧ್ಯಮಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನಗರದ ಶಿವಾಜಿ ವೃತ್ತ, ಚಾಂದ್‌ಬಾವಡಿ ಚೌಕ, ಅಕ್ಕಮಹಾದೇವಿ ರಸ್ತೆ, ಶಾಹ ಪೇಟೆ, ಮಠಪತಿ ಗಲ್ಲಿ, ಗಣಪತಿ ಚೌಕ, ಕಿರಾಣ ಬಜಾರ್‌, ಸರಾಫ್‌ ಬಜಾರ್‌, ಜೋರಾಟಪುರ ಪೇಟೆ, ಅಡಿಕಿ ಗಲ್ಲಿ, ಮೀನಾಕ್ಷಿ ಸುತ್ತಮುತ್ತ, ಡೋಬಳೆ ಗಲ್ಲಿ, ಶಿವಾಜಿ ಪೇಠ್‌, ಉಪಲಿಬುರ್ಜ್‌ ರಸ್ತೆ ಹಾಗೂ ಕೀರ್ತಿ ನಗರದ ಸಾಯಿ ಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಮಂಗಳವಾರವೂ ನಗರದ ಮಾರುಕಟ್ಟೆಯಲ್ಲಿ ಫಲಪುಷ್ಪ, ಬಾಳೆಗಿಡ, ಮಾವಿನ ಎಲೆ, ಅಲಂಕಾರಿಕ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೇ ಬರ ಆವರಿಸಿದ್ದರೂ, ಗಣೇಶೋತ್ಸವ ಸಂಭ್ರಮದ ಮೇಲೆ ಯಾವುದೇ ಪರಿಣಾಮ ಬೀರಿಲ್ಲದಿರುವುದು ಕಂಡುಬಂತು.

ವಿಜಯಪುರ ನಗರದಲ್ಲಿ ಮಂಗಳವಾರ ಗಣಪನ ಮೂರ್ತಿಗಳನ್ನು ಯುವಕರು ಮನೆಗಳಲ್ಲಿ ಪ್ರತಿಷ್ಠಾಪಿಸಲು ಕೊಂಡೊಯ್ದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಸಾಯಿ ರೆಸಿಡೆನ್ಸಿ ಮತ್ತು ಎಕ್ಸ್‌ಟಿಕಾ ಲೇಔಟ್‌ನಲ್ಲಿ ಮೂರನೇ ವರ್ಷದ ಗಣೇಶ ಉತ್ಸವದ ಅಂಗವಾಗಿ ಮೆರವಣಿಗೆ ಮೂಲಕ ಗಣಪನನ್ನು ಕೊಂಡೊಯ್ದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.