ಆಲಮಟ್ಟಿ: ಸ್ವಾತಂತ್ರ ಪೂರ್ವದಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭಗೊಂಡು ನಂತರ ರದ್ದಾಗಿದ್ದ ಆಲಮಟ್ಟಿ-ಯಾದಗಿರಿ ನಡುವಿನ 162 ಕಿ.ಮೀ ಉದ್ದದ ನೂತನ ರೈಲು ಮಾರ್ಗದ ಅಂತಿಮ ಸರ್ವೆ ಕಾರ್ಯ ಮಾಡಲು ಕೇಂದ್ರ ರೈಲ್ವೆ ಇಲಾಖೆ ಆದೇಶಿಸಿದೆ.
ಅಂತಿಮ ಸಮೀಕ್ಷೆ ನಡೆಸಲು ₹4.05 ಕೋಟಿ ಮಂಜೂರು ಮಾಡಿರುವ ವಿಷಯವನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಖಚಿತ ಪಡಿಸಿದ್ದಾರೆ.
ಕಳೆದ 15 ವರ್ಷಗಳಿಂದಲೂ ಈ ಯೋಜನೆ ಜಾರಿಗೆ ಹೋರಾಟಗಳು ನಡೆದಿದ್ದವು. ಕಳೆದ ಡಿಸೆಂಬರ್ ನಿಂದಲೇ ಆಲಮಟ್ಟಿ, ಹುಣಸಗಿ, ಸುರಪುರ, ಮುದ್ದೇಬಿಹಾಳದಲ್ಲು ಹೋರಾಟ ಸಮಿತಿಗಳು ರಚನೆಗೊಂಡು ಕೇಂದ್ರ ರೈಲ್ವೆ ಸಚಿವರಿಗೂ ಹೋಗಿ ಮನವಿ ಸಲ್ಲಿಸಿದ್ದರು.
ಫೆಬ್ರುವರಿಯಲ್ಲಿ ಮಂಡನೆಯಾಗಿದ್ದ ಕೇಂದ್ರ ಬಜೆಟ್‌ನಲ್ಲಿ ಈ ಮಾರ್ಗವನ್ನು ಮತ್ತೇ ನಿರ್ಲಕ್ಷಿಸಲಾಗಿತ್ತು. ರಾಯಚೂರು-ಯಾದಗಿರಿ ಸಂಸದ ಜಿ.ಕುಮಾರ ನಾಯಕ ಹಾಗೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮತ್ತೇ ರೈಲ್ವೆ ಸಚಿವರನ್ನು ಭೇಟಿಯಾಗಿ ಮಾರ್ಗದ ಸಮೀಕ್ಷೆ ಒತ್ತಾಯಿಸಿದ್ದರು.
ಈಗ ಆಲಮಟ್ಟಿ-ಯಾದಗೀರಿ 162 ಕಿ.ಮೀ ಹಾಗೂ ಭದ್ರಾವತಿ-ಚಿಕ್ಕಜಾಜೂರು 73 ಕಿ.ಮೀ ಎರಡು ನೂತನ ರೈಲು ಮಾರ್ಗಗಳ ಕಾಮಗಾರಿಗಳ ಅಂತಿಮ ಸರ್ವೆ ಮಾಡಲು ಆದೇಶಿಸಲಾಗಿದೆ.
ಯಾದಗಿರಿಗೆ ಹೋಗಲು ವಿಜಯಪುರ-ವಾಡಿ ಮೂಲಕ ಸಂಚರಿಸಲು 328 ಕಿ.ಮೀ ಇದ್ದು, ಈ ರೈಲು ಮಾರ್ಗ ನಿರ್ಮಾಣಗೊಂಡರೇ 162 ಕಿ.ಮೀ ಗೆ ಇಳಿಕೆಯಾಗಲಿದೆ.
2011 ರಲ್ಲಿ ಮತ್ತೆ ಸರ್ವೆ ಕೈಗೊಂಡಾಗ ಕಾಮಗಾರಿ ಆರಂಭದ ನಿರೀಕ್ಷೆ ಗರಿಗೆದರಿತ್ತು. ಆದರೆ, ಮತ್ತೆ ನೆನಗುದಿಗೆ ಬಿದ್ದಿದೆ. ಕಬ್ಬು, ಭತ್ತದ ಕಣಜವಾಗಿರುವ ಈ ಪ್ರದೇಶದಲ್ಲಿ ಸಿಮೆಂಟ್ ಹಾಗೂ ಕೃಷಿ ಉತ್ಪನ್ನಗಳ ಸಾಗಾಣಿಕೆಗೂ ನೆರವಾಗಲಿದೆ. ಒಳನಾಡು ಮೀನುಗಾರಿಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಮೀನುಗಾರಿಕೆ ನಡೆಯುವ ಪ್ರದೇಶಗಳಲ್ಲಿ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆ ಮುಂದಿವೆ. ಮೀನು ಸಾಗಾಣಿಕೆಗೂ ಈ ಮಾರ್ಗ ನೆರವಾಗಲಿದೆ. ಜತೆಗೆ ಆಲಮಟ್ಟಿಯ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯಲಿದೆ.
ಆಲಮಟ್ಟಿ-ಯಾದಗಿರಿ ಮಾರ್ಗ ಸಮೀಕ್ಷೆ ಆದೇಶಿಸಿದ್ದರಿಂದ ಈ ಮಾರ್ಗದ ಸಮೀಕ್ಷೆಗೆ ಹೋರಾಟ ನಡೆಸುತ್ತಿರುವ ಹುಣಸಗಿಯ ರಾಘವೇಂದ್ರ ಕಾಮನಟಗಿ, ಆಲಮಟ್ಟಿಯ ಭರತರಾಜ ದೇಸಾಯಿ, ಶಿವಾನಂದ ಅವಟಿ, ರಮೇಶ ಆಲಮಟ್ಟಿ, ಶಂಕರ ಜಲ್ಲಿ, ದಾಮೋದರ ರಾಠಿ, ಮಲ್ಲು ರಾಠೋಡ, ಮಹಾಂತೇಶ ಹಿರೇಮಠ, ಶ್ರೀಧರ ಬಿದರಿ, ರಮೇಶ ರೇಶ್ಮಿ, ಎನ್.ಎ. ಪಾಟೀಲ, ಮುರಳಿ ಬಡಿಗೇರ, ಬಿ.ಕೆ. ಬಾಗವಾನ, ಪರಶುರಾಮ ಮಾದರ, ಎಂ.ಡಿ. ಬಾಗಲಕೋಟೆ, ಮಾರುತಿ ವಡ್ಡರ, ಮೀರಾಸಾ ಬಂಡಿವಡ್ಡರ, ಕೃಷ್ಣಾ ರಾಠೋಡ, ಪ್ರಭಯ್ಯ ಹಿರೇಮಠ, ಶಿವು ಗುಳೇದಗುಡ್ಡ, ಬಿ.ಎಚ್. ಗಣಿ, ಬಸವರಾಜ ಹೆರಕಲ್ಲ, ಹನುಮಂತ ಸುಣಗಾರ, ಸುಭಾಸ ಗೋಖಲೆ ಹರ್ಷ ವ್ಯಕ್ತಪಡಿಸಿದ್ದಾರೆ.
1933 ರಲ್ಲಿ ದಿ ಗೈಡ್ ರೈಲ್ ರೋಡ್ ಫೀಡರ್ ಲೈನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಿ. ಸ್ಕೆಲ್ಚನ್ ಈ ಕೆಲಸಕ್ಕೆ ಚಾಲನೆ ನೀಡಿ ಮಂಡಳಿ ರಚಿಸಿದ್ದರು. ಅದಕ್ಕಾಗಿ ಷೇರು ಹಣವನ್ನು ಸಂಗ್ರಹಿಸಲಾಗಿತ್ತು. ಷೇರು ಹಣವನ್ನು ರೈಲ್ವೆ ಬೋರ್ಡ್ ಗೆ ಭರಿಸಲಾಯಿತು. ಈ ಕಾಮಗಾರಿಗೆ ₹56664 ಯೋಜನಾ ವೆಚ್ಚ ನಿಗದಿಯಾಗಿತ್ತು. ಆಲಮಟ್ಟಿಯಿಂದ ಒಂದು ಕಿ.ಮೀ ದೂರದಲ್ಲಿನ ಜಾಲಾಪುರ ಹಳ್ಳಕ್ಕೆ (ದೇವಲಾಪುರ) ಸೇತುವೆಯನ್ನು ಕಟ್ಟಲಾಗಿತ್ತು. ಆಲಮಟ್ಟಿ ಜಲಾಶಯದ ಹಿನ್ನೀರು ಇಳಿದಾಗ ಈ ಸೇತುವೆಯ ಮೇಲ್ಭಾಗ ಗೋಚರಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಿದಾಗ ಸ್ಕೆಲ್ಚನ್ ಸ್ವದೇಶಕ್ಕೆ ಮರಳಿದರು. ತದನಂತರ ಕಾಮಗಾರಿಗೆ ತಿಲಾಂಜಲಿ ಬಿತ್ತು ಎಂಬುದು ಇತಿಹಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.