
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಹಭಾಗಿತ್ವದಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್ ಫೋರ್ಸ್’ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಆನಂದ್ ಉದ್ಘಾಟಿಸಿದರು.
ವಿಜಯಪುರ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಹಭಾಗಿತ್ವದಲ್ಲಿ ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ‘ಗೈಡಿಂಗ್ ಫೋರ್ಸ್’ ತರಬೇತಿ ಕಾರ್ಯಾಗಾರವು ಸಾವಿರಾರು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಕನಸಗಳನ್ನು ಬಿತ್ತಿ, ಸಾಕಾರದ ಭರವಸೆ ಮೂಡಿಸಿತು.
ಯುಪಿಎಸ್‌ಸಿ, ಕೆಪಿಎಸ್‌ಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹೇಗೆ ನಡೆಸಬೇಕು? ತರಬೇತಿಯನ್ನು ಎಲ್ಲಿ ಮತ್ತು ಹೇಗೆ ಪಡೆಯಬೇಕು? ಯಾವ ಪುಸ್ತಕಗಳನ್ನು ಓದಬೇಕು? ಅಣಕು ಪರೀಕ್ಷೆಗಳು ಎಷ್ಟು ಮುಖ್ಯ? ಸಂದರ್ಶನಕ್ಕೆ ಸಿದ್ಧತೆ ಹೇಗೆ ಮಾಡಬೇಕು? ಯಾವೆಲ್ಲ ವಿಷಯವಾಗಿ ಪ್ರಶ್ನೆಗಳು ಎದುರಾಗುತ್ತವೆ? ಪ್ರತಿ ದಿನ ಎಷ್ಟು ಗಂಟೆ ಅಧ್ಯಯನ ಮಾಡಬೇಕು? ಓದಿದ ವಿಷಯವನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆ, ಸಂದೇಹಗಳಿಗೆ ವಿಶೇಷ ಭಾಷಣಕಾರರಾಗಿ ಬಂದಿದ್ದ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿನಯ್ ಕುಮಾರ್ ಜಿ.ಬಿ. ಉತ್ತರವಾದರು.
ಪರೀಕ್ಷಾರ್ಥಿಗಳಿಗೆ ದೈಹಿಕ, ಮಾನಸಿಕ ಆರೋಗ್ಯ ಎಷ್ಟು ಮುಖ್ಯ? ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಕುಟುಂಬ, ಬಂಧು ಬಳಗ, ಸ್ನೇಹಿತರು, ಸಮಾಜ ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳು ಎಂಥವು? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಶಾಲಿಯಾದರೆ ಸಿಗುವ ಗೌರವ ಎಷ್ಟು? ಸೋಲಾದರೆ ಎದುರಿಸಬೇಕಾದ ಟೀಕೆ, ಟಿಪ್ಪಣಿ, ಮಾನಸಿಕ ಒತ್ತಡ ಹೇಗಿರುತ್ತದೆ? ಅದನ್ನು ಎದುರಿಸುವುದು ಹೇಗೆ? ಆಡಳಿತ ಸೇವೆಗೆ ಸೇರಿದ ಮೇ ಲೆ ಎದುರಾಗಬಹುದಾದ ಸವಾಲುಗಳೇನು? ಅವುಗಳನ್ನು ನಿವಾರಿಸುವುದು ಹೇಗೆ? ಐಎಎಸ್, ಐಪಿಎಸ್ ಅಧಿಕಾರಿಗಳ ಗತ್ತು, ಜೀವನಾನುಭವ ಹೇಗಿರುತ್ತದೆ? ಸಿಗುವ ಗೌರವ, ಮರ್ಯಾದೆ ಎಂಥದ್ದು ಎಂಬ ತಮ್ಮ ಅನುಭವದ ಮಾತುಗಳನ್ನು ಜಿಲ್ಲಾಧಿಕಾರಿ ಡಾ.ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸುವ ಮೂಲಕ ವಿದ್ಯಾರ್ಥಿ, ಯುವಜನರ ಐಎಎಸ್, ಐಪಿಎಸ್ ಕನಸಿಗೆ ನೀರೆರೆದರು.
ಭಾಷಣಗಳಿಂದ ಪ್ರೇರಿತರಾದ ಸಾವಿರಾರು ವಿದ್ಯಾರ್ಥಿಗಳು ತಾವೂ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸುವುದಾಗಿ ಸಂಕಲ್ಪ ಮಾಡಿದರು. ಅಲ್ಲದೇ, ತಮ್ಮ ಸಂದೇಹಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಂಡರು.
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವಿದ್ಯಾರ್ಥಿ, ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗ್ಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಿಂದ ಹೊಸ ಹೊಸ ವಿಷಯಗಳು ತಿಳಿಯಿತು, ಪರೀಕ್ಷೆಗೆ ಅಣಿಯಾಗಲು ಅನುಕೂಲವಾಯಿತು. ನಮ್ಮ ಹಲವು ಸಂದೇಹಗಳಿಗೆ ಈ ಕಾರ್ಯಾಗಾರದಿಂದ ಉತ್ತರ ಲಭಿಸಿತು ಎಂದು ಅನೇಕರು ಕೃತಜ್ಞತೆ ಸಲ್ಲಿಸಿದರು.
ವಿಜಯಪುರದವರೇ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಹಾಗೂ ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ಭಾಷಣಗಳಿಂದ ಆಕರ್ಷಿತರಾದ ವಿದ್ಯಾರ್ಥಿ, ಯುವಜನರು ಅವರ ಜೊತೆ ಫೋಟೋ, ಸೆಲ್ಪಿ ತೆಗೆದುಕೊಂಡು, ಖುಷಿಪಟ್ಟರು. ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗುವ ಕನಸು ಹೊತ್ತು, ಗತ್ತಿನಲ್ಲಿ ಮನೆಯತ್ತ ಹೆಜ್ಜೆ ಹಾಕಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು, ವಿವಿಧ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಜೊತೆಗೆ ನಗರದ ವಿವಿಧ ತರಬೇತಿ ಕೇಂದ್ರಗಳಲ್ಲಿ (ಕೋಚಿಂಗ್ ಸೆಂಟರ್) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.