ADVERTISEMENT

ವಿರಾಟ್ ಹಿಂದೂ ಸಮಾವೇಶ| ಸಮಗ್ರ ಭಾರತವೇ ಹಿಂದೂ ಆಗಲಿ: ಹಣಮಂತ ಮಳಲಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:43 IST
Last Updated 2 ಫೆಬ್ರುವರಿ 2026, 2:43 IST
ಸಿಂದಗಿಯಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದ ಬಹಿರಂಗ ಸಭೆಯಲ್ಲಿ  ಹಣಮಂತ ಮಳಲಿ ಮಾತನಾಡಿದರು 
ಸಿಂದಗಿಯಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದ ಬಹಿರಂಗ ಸಭೆಯಲ್ಲಿ  ಹಣಮಂತ ಮಳಲಿ ಮಾತನಾಡಿದರು    

ಸಿಂದಗಿ: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದೇ ಕಾನೂನು ಬರುವವರೆಗೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಸಾಧನ ಅನುಸರಿಸಬಾರದು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು. ಸ್ವದೇಶಿ ಜೀವನಶೈಲಿ ಬರಬೇಕು. ಸಮಗ್ರ ಭಾರತವೇ ಹಿಂದೂ ಆಗಬೇಕು. ಇಲ್ಲದಿದ್ದರೆ ದೇಶ ಆಂತರಿಕವಾಗಿ ದುರ್ಬಲಗೊಳ್ಳುತ್ತದೆ ಎಂದು ಧರ್ಮಜಾಗರಣಾ ವೇದಿಕೆಯ ಹಣಮಂತ ಮಳಲಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿನ ಶ್ರೀಕೃಷ್ಣ ಗೋರಕ್ಷಾ ಕೇಂದ್ರದ ಮುಂಭಾಗ ಮೈದಾನದಲ್ಲಿ ಶನಿವಾರ ನಡೆದ ವಿರಾಟ್ ಹಿಂದೂ ಸಮಾವೇಶದ ಬಹಿರಂಗ ಸಭೆಯಲ್ಲಿ ದಿಕ್ಸೂಚಿ ಭಾಷಣಕರರಾಗಿ ಮಾತನಾಡಿದರು.

ಇಂದಿನ ಶಿಕ್ಷಣ ಜೀವನ ಶಿಕ್ಷಣವಾಗಿರದೇ ಉಪಜೀವನ ಶಿಕ್ಷಣವಾಗಿದೆ. ಹಿಂದೂತ್ವದಲ್ಲಿರಬಹುದಾದ ಕತ್ತಲೆ ತೆಗೆದು ಹಾಕಲು ಇಂಥ ಸಮ್ಮೇಳನಗಳು ಅಗತ್ಯ ಎಂದರು.

ADVERTISEMENT

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ನಿರೀಕ್ಷೆಯಷ್ಟು ಹಿಂದೂಗಳು ಸಮಾವೇಶದಲ್ಲಿ ಪಾಲ್ಗೊಂಡಿಲ್ಲ.  ಸಮಾವೇಶದಲ್ಲಿ ಭಾಗವಹಿಸಿದರೆ ಪೊಲೀಸರ ವಿಚಾರಣೆಗೊಳಗಾಗುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಬೇಕು’ ಎಂದು ಹೇಳಿದರು.

ಮಹಿಳಾ ಪ್ರತಿನಿಧಿ ವೈದ್ಯೆ ಶಾರದಾ ನಾಡಗೌಡ ಮಾತನಾಡಿ, ಹಿಂದೂ ಎಂಬುದು ಜೀವನ ಪದ್ದತಿ. ವೈವಿಧ್ಯತೆಯಲ್ಲಿ ಏಕತೆ. ಸಮರಸ, ಸಹಬಾಳ್ವೆ ಜೀವನ ಅದುವೇ ಹಿಂದುತ್ವ ಎಂದರು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಪ್ರಭು ಸಾಠರಂಗದೇವ ಶಿವಾಚಾರ್ಯ ಸ್ವಾಮೀಜಿ, ‘ಹಿಂದೂ ಮಂದಿರ ಕಟ್ಟಿ ಅಲ್ಲಿ ಭಾರತ ಮಾತೆಯನ್ನು ಪ್ರತಿಷ್ಠಾಪನೆ ಮಾಡಬೇಕು. ಯುವಕರು ಹಿಂದೂ ಧರ್ಮದ ರಕ್ಷಣೆಯ ಪ್ರಮಾಣ ಮಾಡಬೇಕು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿಂದೂ ಧರ್ಮದ ಎಲ್ಲ ಒಳಪಂಗಡಗಳ ಮುಖಂಡರನ್ನು ಗೌರವಿಸಲಾಯಿತು.
ಬೋರಗಿ-ಪುರದಾಳ ವಿಶ್ವಾರಾಧ್ಯಮಠದ ಶ್ರೀ, ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ, ಆದಿಶೇಷ ಸಂಸ್ಥಾನಹಿರೇಮಠದ ರಾಜಯೋಗಿ ವಿರಾಜಸ್ವಾಮೀಜಿ, ಮೂರುಝಾವದೀಶ್ವರ ರಾಮಚಂದ್ರ ಸ್ವಾಮೀಜಿ, ರಾಘವೇಂದ್ರಮಠದ ವಿಠಲಾಚಾರ್ಯರು ಸಮಾವೇಶದ ಸಾನ್ನಿಧ್ಯ ವಹಿಸಿದ್ದರು.

‘ಸಮಾವೇಶದಿಂದ ಜಾಗೃತಿ ಸಾಧ್ಯವಿಲ್ಲ’

ಒಂದು ದಿನದ ಸಮಾವೇಶದಿಂದ ಜಾಗೃತಿ ಸಾಧ್ಯವಿಲ್ಲ. ಹಿಂದೂಗಳು ಎಂದು ಹೇಳಿಕೊಳ್ಳಲು ಮುಜುಗರ ಪಡುವ ಜನರಿದ್ದಾಗ ಅಂಥವರಿಂದ ಹಿಂದೂ ಜಾಗೃತಿ ಆಗಲಾರದು. ಮನೆ ಮನೆಗೆ ಹೋಗಿ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ  ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.