ADVERTISEMENT

ಮಟ್ಕಾ, ಬೆಟ್ಟಿಂಗ್​​ ದಂಧೆ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ: ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.​ಡಿ. ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 16:40 IST
Last Updated 21 ಅಕ್ಟೋಬರ್ 2021, 16:40 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ವಿಜಯಪುರ: ರಾಜ್ಯದಲ್ಲಿ ಮಟ್ಕಾ, ಬೆಟ್ಟಿಂಗ್ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.‌

ಸಿಂದಗಿ ತಾಲ್ಲೂಕಿನ ಯಂಕಂಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯೂ ಅನೇಕ ಕಡೆ ಮಟ್ಕಾ, ಬೆಟ್ಟಿಂಗ್‌ ದಂಧೆ ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಆದರೂ ರಾಜ್ಯ ಸರ್ಕಾರ ಮೌನವಾಗಿದೆ ಎಂದರು.

ಹಣ ಕೊಟ್ಟು ಜಿಲ್ಲೆಗೆ ಪೋಸ್ಟಿಂಗ್‌ ಮಾಡಿಸಿಕೊಂಡು ಬಂದಿರುವ ಅಧಿಕಾರಿಗಳಿಗೆ 'ಮಂತ್ಲಿ' ತಪ್ಪದೆ ಹೋಗುತ್ತಿದೆ. ದೊಡ್ಡದೊಂದು ಗ್ಯಾಂಗ್‌ ಜಿಲ್ಲೆಯಲ್ಲಿ ಈ ದಂಧೆಗಳನ್ನು ವ್ಯಾಪಕ ಮಟ್ಟದಲ್ಲಿ ಆಪರೇಟ್‌ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ನಾನು ಮುಖ್ಯಮಂತ್ರಿಯಾಗಿದ್ದಾಗ ಇಂಥ ದಂಧೆಗಳಿಗೆ ಕಡಿವಾಣ ಹಾಕಿದ್ದೆ. ಆದರೆ, ಈಗ ಮತ್ತೆ ಕಾಣಿಸಿಕೊಂಡಿದೆ. ಇವುಗಳಿಗೆ ಪೊಲೀಸ್‌ ಇಲಾಖೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ಹಂತದಲ್ಲಿರುವವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.

ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿರುವ, ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಈ ದಂಧೆಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ದುರಾಡಳಿತದಿಂದ ನಡೆಯುತ್ತಿವೆ ಎಂದು ಆರೋಪಿಸಿದರು.

ಸಾಮಾನ್ಯ ಮನುಷ್ಯ ಅಲ್ಲ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದೂ ಸಾಮಾನ್ಯ ಮನುಷ್ಯ (ಕಾಮನ್ ಮ್ಯಾನ್) ಆಗಲು ಸಾಧ್ಯವೇ ಇಲ್ಲ. ಅವರೆಂದು ಜನಸಾಮಾನ್ಯರ ಪರ ಇಲ್ಲ. ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಏರಲು ಬಿಟ್ಟು ಜನಸಾಮಾನ್ಯರ ಜೀವನವನ್ನು ನರಕ ಮಾಡಿರುವ ಬೊಮ್ಮಾಯಿ ಕಾಮನ್‌ ಮ್ಯಾನ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹಣ ಇಲ್ಲ:ಬಿಜೆಪಿಯವರು ಹಿಂದೆ ಐದು ವರ್ಷ ಆಡಳಿತ ನಡೆಸಿದ್ದನ್ನು ನೋಡಿದ್ದೇವೆ. ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪಥನ ಮಾಡಿ ಸರ್ಕಾರ ಮಾಡಿ ಈಗ ಆಡಳಿತ ನಡೆಸುತ್ತಿರುವುದನ್ನೂ ನೋಡುತ್ತಿದ್ದೇನೆ ಎಂದರು.

ಕೋವಿಡ್‌ನಿಂದ ಆರ್ಥಿಕ ತೊಂದರೆ ಇದೆ ಎನ್ನುವ ನೆಪವೊಡ್ಡಿ ಸರ್ಕಾರ, ನೀರಾವರಿ ಇಲಾಖೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತ ಮಾಡಿದೆ. ಇನ್ನೂ ರೂ 6ಸಾವಿರ ಕೋಟಿ ಹಣ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿ ಇದೆ. ಇವರಿಗೆ ಭ್ರಷ್ಟಾಚಾರ ಮಾಡಲು ಹಣವಿದೆ. ಯೋಜನೆಗಳಿಗೆ ಕೊಡಲು ಹಣ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ನಮ್ಮದು ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಪ್ರತಿನಿಧಿಸುವ ಜಾತ್ಯತೀಯ ಪಕ್ಷ. ಸಿದ್ದರಾಮಯ್ಯ ಅವರಿಂದ ನಾವು ಹಿತೋಪದೇಶ ಪಡೆಯುವ ಅಗತ್ಯವಿಲ್ಲ

– ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.