ವಿಜಯಪುರ: ಭೀಮಾ ಮತ್ತು ಸೀನಾ ನದಿಗಳ ಪ್ರವಾಹದಿಂದ ವಿಜಯಪುರ - ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು, ಅಂತರರಾಜ್ಯ ಸಂಪರ್ಕ ಕಡಿತವಾಗಿದೆ.
ಮಹಾರಾಷ್ಟ್ರದ ವಡಕಬಾಳ ಮತ್ತು ಹತ್ತೂರ ಗ್ರಾಮಗಳ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಎರಡು ದಿನಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯ ಸಂಪರ್ಕ ಕಡಿತವಾಗಿದೆ. ಇಕ್ಕೆಲಗಳಲ್ಲಿ ಕಿ.ಮೀ.ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಚಾಲಕರು ಹೆದ್ದಾರಿಯಲ್ಲೇ ಅಡುಗೆ ತಯಾರಿಸಿ ಉಂಡು, ಮಲಗುತ್ತಿದ್ದಾರೆ.
ಹೆದ್ದಾರಿ ಮೇಲೆ ನದಿಗಳ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ವಾಹನಗಳು, ಸಾರ್ವಜನಿಕರು ಸಂಚರಿಸದಂತೆ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ಇಂಡಿ ತಾಲ್ಲೂಕಿನ ಪಡನೂರ, ಖಾನಾಪುರ, ಗುಬ್ಬೆವಾಡ, ಹಿಳ್ಳಿ, ಭುಯ್ಯಾರ, ಕೂಡಿಗನೂರ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಹತ್ತಿರ ಡೋಣಿ ನದಿಯಲ್ಲಿ ಬುಧವಾರ ಬೈಕ್ ಸಮೇತ ಕೊಚ್ಚಿ ಹೋದ ಯುವಕ ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ.
ಸ್ಥಳದಲ್ಲಿಯೇ ಬೀಡುಬಿಟ್ಟಿರುವ ಕುಟುಂಬದ ಸದಸ್ಯರಿಗೆ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಗುರುವಾರ ಭೇಟಿ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ತಾಳಿಕೋಟೆಗೆ ಬಂದಿದ್ದ ವಡವಡಗಿ ಗ್ರಾಮದ ಯುಕರಿಬ್ಬರು ಮರಳಿ ಹೋಗುವಾಗ ಡೋಣಿ ಸೇತುವೆ ಮೇಲಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದರು. ಅವರಲ್ಲಿ ಒಬ್ಬನನ್ನು ರಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.