ADVERTISEMENT

ಎಚ್‌ಐವಿ ಸೋಂಕಿನ ಪ್ರಮಾಣ ಇಳಿಮುಖ: ಡಿಸಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 16:09 IST
Last Updated 1 ಡಿಸೆಂಬರ್ 2021, 16:09 IST
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ  ವಿಶ್ವ ಏಡ್ಸ್ ದಿನದದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರೆಡ್ಡಿ ಇದ್ದಾರೆ 
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ  ವಿಶ್ವ ಏಡ್ಸ್ ದಿನದದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರೆಡ್ಡಿ ಇದ್ದಾರೆ    

ವಿಜಯಪುರ: ವಿಶ್ವಕ್ಕೆ ಒಂದು ಸಮಸ್ಯೆಯಾಗಿ ಪರಿಣಮಿಸಿದ್ದ ಎಚ್‌ಐವಿ ಸೋಂಕು ಹರಡದಂತೆ ತಡೆಯಲು ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಮೂಲಕ ಇತ್ತೀಚಿನ ವರ್ಷಗಳಲ್ಲಿ ಇದರ ಸಂಖ್ಯೆಯಲ್ಲಿ ಬಹಳ ಇಳಿಮುಖ ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದದ ಅಂಗವಾಗಿ ‘ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್‌ ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್ ಬಗ್ಗೆ ಜನರಲ್ಲೂ ಸರಿಯಾದ ಅರಿವು ಉಂಟಾಗುತ್ತಿದ್ದು, ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಸೋಂಕಿತ ಗರ್ಭಿಣಿಯರಿಂದ ಅವರ ಮಕ್ಕಳಿಗೂ ಹರಡುತ್ತಿಲ್ಲ ಎಂದು ಅವರು ಹೇಳಿದರು.

ADVERTISEMENT

ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಪ್ರಯತ್ನದಿಂದಾಗಿ ಜನರಿಗೆ ಈ ರೋಗದ ಕಾರಣ ಹಾಗೂ ಚಿಕಿತ್ಸೆಗಳ ಬಗ್ಗೆ ಸರಿಯಾದ ಅರಿವು, ಮಾಹಿತಿ ಲಭ್ಯವಾಗುತ್ತಿದೆ. ಸೋಂಕಿತರು ಇದರ ಬಗ್ಗೆ ಮೊದಲಿನಂತೆ ಸಂಕೋಚ ಪಡುತ್ತಿಲ್ಲ. ಧೈರ್ಯದಿಂದ ಮುಂದೆ ಬಂದು ಚಿಕಿತ್ಸೆ ಪಡೆದು, ಆರೋಗ್ಯಯುತ ಜೀವನಶೈಲಿಯಿಂದ ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಟ್ರಕ್ ಚಾಲಕರು ಸೇರಿದಂತೆ ಇನ್ನೂ ಕೆಲವು ಪತ್ತೆಯಿಂದ ಹೊರಗುಳಿದಿರುವ ಸೋಂಕಿತರನ್ನು ಗುರುತಿಸಿ, ಅವರಿಗೆ ಸೂಕ್ತ ಅರಿವು ಹಾಗೂ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು. ಇದರಿಂದ ಸೋಂಕು ಅವರ ಕುಟುಂಬದವರಿಗೆ ಹರಡದಂತೆ ನೋಡಿಕೊಳ್ಳಬಹುದು. ಹಾಗೆಯೇ ಸೋಂಕಿತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರೆಡ್ಡಿ, ಜಾನಪದ ಕಲಾವಿದರಾದ ಸಿದ್ದಪ್ಪ ಬಿದರಿ, ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ ಚವ್ಹಾಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್ ಲಕ್ಕಣ್ಣವರ, ಡಾ. ರಾಜೇಶ ಹೊನ್ನುಟಗಿ, ಪೀಟರ್ ಅಲೆಕ್ಸಾಂಡರ್, ಗಂಗಯ್ಯಾ ಹಿರೇಮಠ, ರವಿ ಕಿತ್ತೂರ, ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಈರಣ್ಣ ಧಾರವಾಡಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.