
ವಿಜಯಪುರ: ಕರ್ನಾಟಕ ರಾಜ್ಯದ ಗೃಹ ರಕ್ಷಕರಿಗೆ ಸಾಂದರ್ಭಿಕ ಕರ್ತವ್ಯಕ್ಕೆ ಬದಲಾಗಿ 365 ದಿನಗಳ ಪೂರ್ಣಾವಧಿ ಕರ್ತವ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಬರ್ ರೈಟ್ಸ್ ಫೋರಂ (ಗೃಹ ರಕ್ಷಕರ ಪೋಷಕರ ಹಕ್ಕು ಸಂರಕ್ಷಣಾ ಸಮಿತಿ) ನಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಮತ್ತು ಹೊರ ರಾಜ್ಯ ಚುನಾವಣೆ ಕರ್ತವ್ಯ, ತುರ್ತು ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಮತ್ತು ನಾಡ ಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತ್ ಸೇರಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕರ್ತವ್ಯ ಸಿಗುತ್ತದೆ. ಇನ್ನುಳಿದ 9 ತಿಂಗಳು ಗೃಹ ರಕ್ಷಕರು ಕೆಲಸವಿಲ್ಲದೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಲೇಬರ್ ರೈಟ್ಸ್ ಫೋರಂ ಸಂಸ್ಥಾಪಕ ಅಧ್ಯಕ್ಷ ಪಾವಗಡ ಶ್ರೀರಾಮ್ ಹೇಳಿದರು.
ಮನೆ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗಿದೆ. ಆದ ಕಾರಣ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ಕರ್ನಾಟಕದಲ್ಲೂ ಕೂಡ ಪೂರ್ಣಾವಧಿ ಕರ್ತವ್ಯ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲ ಗೃಹ ರಕ್ಷಕರಿಗೆ ಆಂಧ್ರ, ತೆಲಂಗಾಣ ರಾಜ್ಯಗಳ ರೀತಿ ₹1 ಸಾವಿರ ಸಮಾನ ವೇತನ ನೀಡಬೇಕು, ಹಾಲಿ ಗೃಹ ರಕ್ಷಕರ ಪೂರ್ಣಾವಧಿ ಕರ್ತವ್ಯ ನೀಡುವವರೆಗೂ ಹೊಸ ನೇಮಕಾತಿಯನ್ನು ತಡೆಯಬೇಕು, ಪೊಲೀಸ್ ನೇಮಕಾತಿಯಲ್ಲಿ ಗೃಹ ರಕ್ಷಕರಿಗೆ ಪ್ರಥಮ ಆದ್ಯತೆ ಮೇರೆಗೆ ಶೇ 50ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
426 ಯೂನಿಟ್ ಆಫೀಸರ್ಸ್‌ಗಳಿಗೆ ಉಚಿತ ದ್ವಿಚಕ್ರ ವಾಹನ ಜೊತೆಗೆ ಎ.ಎಸ್.ಐ ಗೌರವ ನೀಡಬೇಕು, ಕಾರ್ಮಿಕ ಇಲಾಖೆಯಿಂದ ನೀಡುವ ಎಲ್ಲ ಸವಲತ್ತುಗಳನ್ನು ಗೃಹ ರಕ್ಷಕರಿಗೆ ನೀಡಬೇಕು, ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಸೇರಿದಂತೆ ಎಲ್ಲ ಕಡೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು, ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಒದಗಿಸಬೇಕು, ವಸತಿ ಸೌಲಭ್ಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.