ADVERTISEMENT

ವಿಜಯಪುರದಲ್ಲಿ ಕೈಬೀಸಿ ಕರೆಯುತ್ತಿದೆ ‘ಸಸ್ಯ ಸಂತೆ’

ತೋಟಗಾರಿಕೆ ಇಲಾಖೆಯಿಂದ ಮೊದಲ ಬಾರಿಗೆ ಆಯೋಜನೆ

ಸುಭಾಸ ಎಸ್.ಮಂಗಳೂರ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ವಿಜಯಪುರದ ಬಸವ ವನದಲ್ಲಿ ಆಯೋಜಿಸಿರುವ ಸಸ್ಯ ಸಂತೆಯಲ್ಲಿ ಸಾರ್ವಜನಿಕರು ಸೋಮವಾರ ಸಸಿಗಳನ್ನು ಖರೀದಿಸಿದರು
ವಿಜಯಪುರದ ಬಸವ ವನದಲ್ಲಿ ಆಯೋಜಿಸಿರುವ ಸಸ್ಯ ಸಂತೆಯಲ್ಲಿ ಸಾರ್ವಜನಿಕರು ಸೋಮವಾರ ಸಸಿಗಳನ್ನು ಖರೀದಿಸಿದರು   

ವಿಜಯಪುರ: ನಳನಳಿಸುವ ತೆಂಗಿನ ಸಸಿಗಳು, ಸುಗಂಧ ಬೀರುವ ಹೂವುಗಳು, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹಣ್ಣಿನ ಗಿಡಗಳನ್ನು ಖರೀದಿಸಲು, ತರಹೇವಾರಿ ಸಸಿಗಳನ್ನು ವೀಕ್ಷಿಸಲು ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ.

ನಗರದ ಬಸವ ವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಇದೇ ಮೊದಲ ಬಾರಿಗೆ ಆಯೋಜಿಸಿರುವ ಸಸ್ಯ ಸಂತೆಯು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ.

ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಕಡಿಮೆ ಬೆಲೆಯಲ್ಲಿ ಹಣ್ಣು, ಹೂ, ಔಷಧೀಯ ಸಸ್ಯಗಳನ್ನು ನಗರ ಪ್ರದೇಶದ ಜನತೆಗೆ ಮಾರಾಟ ಮಾಡುವ ಉದ್ದೇಶದಿಂದ ‘ಸಸ್ಯ ಸಂತೆ’ಯನ್ನು ಆಯೋಜಿಸಲಾಗಿದೆ.

ADVERTISEMENT

ಮಾವು, ದ್ರಾಕ್ಷಿ, ಪೇರಲ, ಗುಲಾಬಿ, ದಾಸವಾಳ, ಮಲ್ಲಿಗೆ ಸೇರಿದಂತೆ 55 ಬಗೆಯ ಹಣ್ಣು ಮತ್ತು ಹೂವಿನ ಗಿಡಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ನಗರ ಪ್ರದೇಶದ ಜನರಲ್ಲಿ ಸೌಂದರ್ಯ ಪ್ರಜ್ಞೆಯನ್ನು ಬೆಳೆಸುವುದು, ಮನೆ ಸುತ್ತಮುತ್ತ ಮತ್ತು ಮುಂಭಾಗದಲ್ಲಿ ಲಭ್ಯವಿರುವ ಸ್ವಲ್ಪ ಜಾಗದಲ್ಲೇ ಸಸಿಗಳನ್ನು ಬೆಳೆಸುವಂತೆ ಪ್ರೇರೇಪಿಸುವುದು ಸಸ್ಯ ಸಂತೆಯ ಮುಖ್ಯ ಗುರಿಯಾಗಿದೆ.

₹160ಕ್ಕೆ ತೆಂಗಿನ ಸಸಿ: ಹೈಬ್ರಿಡ್ ತೆಂಗಿನ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಇವುಗಳಿಗೆ ಒಂದಕ್ಕೆ ₹160 ದರ ವಿಧಿಸಲಾಗಿದೆ. ಈ ಸಸಿಯನ್ನು ಖಾಸಗಿಯವರು ₹400 ರಿಂದ ₹500ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು 5 ರಿಂದ 10 ಅಡಿ ಮಾತ್ರ ಬೆಳೆಯುತ್ತದೆ. ಹೀಗಾಗಿ, ನಿಂತುಕೊಂಡೇ ತೆಂಗಿನಕಾಯಿಗಳನ್ನು ಕೀಳಬಹುದಾಗಿದೆ. ಹೀಗಾಗಿ ರೈತರು ಸೇರಿದಂತೆ ನಗರ ಪ್ರದೇಶದ ಜನರು ಕೂಡ ಹೈಬ್ರಿಡ್ ತೆಂಗಿನ ಸಸಿಗಳನ್ನು ಖರೀದಿಸುತ್ತಿದ್ದಾರೆ.

ಯೋಜನೆಗಳ ಮಾಹಿತಿ: ತೋಟಗಾರಿಕೆಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕೌಂಟರ್ ತೆರೆಯಲಾಗಿದೆ. ಮಳೆ ನೀರು ಸಂಗ್ರಹ, ಕೊಳವೆಬಾವಿ ಮರುಪೂರಣ, ಜಲ ಮರುಪೂರಣ, ಸಾವಯವ ಮತ್ತು ಜೈವಿಕ ಗೊಬ್ಬರ ತಯಾರಿಕೆ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ.

‘ಸಸ್ಯ ಸಂತೆಗೆ ನಗರದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಮಗಂತೂ ತುಂಬಾ ಖುಷಿಯಾಗಿದೆ. ಹಣ್ಣು ಮತ್ತು ಹೂವಿನ ಸಸಿಗಳಿಗೆ ನಮ್ಮಲ್ಲಿ ₹25 ದರವಿದೆ. ಇದನ್ನೇ ಖಾಸಗಿಯವರ ಬಳಿ ಖರೀದಿಸಬೇಕಾದರೆ ₹50 ರಿಂದ ₹60 ಕೊಡಬೇಕು. ಹೀಗಾಗಿ ಜನರು ಖುಷಿಯಾಗಿ ತಮಗೆ ಇಷ್ಟವಾಗುವ ಸಸಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ನಮ್ಮ ಶ್ರಮ ಸಾರ್ಥಕವಾದಂತಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.