ADVERTISEMENT

ನಾಲತವಾಡ | ಕುಸಿದ ಮನೆ: ಪ್ರಾಣ ಉಳಿಸಿದ ನೆರೆಹೊರೆಯವರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:48 IST
Last Updated 16 ಸೆಪ್ಟೆಂಬರ್ 2025, 4:48 IST
ಕುಸಿದ ಮನೆಯಲ್ಲಿ ಮಣ್ಣಿನಡಿ ಸಿಲುಕಿದ ಮಹಿಳೆ
ಕುಸಿದ ಮನೆಯಲ್ಲಿ ಮಣ್ಣಿನಡಿ ಸಿಲುಕಿದ ಮಹಿಳೆ   

ನಾಲತವಾಡ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಏಕಾಏಕಿ ಕುಸಿದ ಪರಿಣಾಮ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದ ಸುಲ್ತಾನಪುರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ.

ಮಹಾದೇವಪ್ಪ ಬಸನಗೌಡ ಅರಮನೆ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ವಾಸ ಮಾಡಲು ಮನೆಯಿಲ್ಲದೆ ಇದೀಗ ಅವರು ಕಣ್ಣೀರು ಹಾಕುವಂತಾಗಿದೆ. ಅಗತ್ಯ ವಸ್ತುಗಳು ನಾಶವಾಗಿದ್ದು, ಬೇರೆಯವರ ಆಸರೆಯಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಳ ಮನೆಯಲ್ಲಿ ಮಲಗಿದ್ದ ಪತ್ನಿ ನೀಲಮ್ಮ ಹಾಗೂ ಪುತ್ರಿ ರೇಣುಕಾ(ಮುತ್ತಮ್ಮ) ಎಂಬುವವರು ಕುಸಿದ ಮಣ್ಣಿನಡಿ ಕಾಣದಂತೆ ಸಂಪೂರ್ಣ ಸಿಲುಕಿಕೊಂಡು ಸರಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವರಂತೆ ಬಂದ ನೆರೆಹೊರೆಯವರು: ನಸುಕಿನ 3.30ರ ವೇಳೆ ಮನೆ ಕುಸಿತದ ಬಾರೀ ಶಬ್ದ ಕೇಳಿಸಿಕೊಂಡ ನೆರಹೊರೆಯವರಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರುನಾಥ ಬಡಿಗೇರ ಹಾಗೂ ಅವರ ಕುಟುಂಬದ ವೀರೇಶ ಬಡಿಗೇರ, ಪಕ್ಕದ ಮನೆಯ ಪರಮಣ್ಣ ಬಿಜ್ಜೂರ, ಯಮನಪ್ಪ ಅಂಬಿಗೇರ, ಯಮನಪ್ಪ ಗೌರೋಜಿ, ಬಸಪ್ಪ ಚಲವಾದಿ, ಶಿವಾಜಿ ಭೋಸಲೆ ಎಂಬುವವರು ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಕಾಣದಂತೆ ಸಿಲುಕಿಕೊಂಡಿದ್ದ ತಾಯಿ, ಮಗಳನ್ನು ರಕ್ಷಿಸಿ ಸಮೀಪದ ನಾಲತವಾಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಅಧಿಕಾರಿಗಳ ಭೇಟಿ: ವಿಷಯ ತಿಳಿದು ಪ.ಪಂ ಸದಸ್ಯರಾದ ಪೃಥ್ವಿರಾಜ ನಾಡಗೌಡ, ತಾ.ಪಂ ಇಒ ವೆಂಕಟೇಶ ವಂದಾಲ, ಪಿಡಿಒ ಕೆ.ಎಚ್.ಕುಂಬಾರ, ಕಾರ್ಯದರ್ಶಿ ಬಾಳಪ್ಪ ವಾಲಿಕಾರ, ಕಂದಾಯ ನಿರೀಕ್ಷಕರಾದ ವಿ.ವಿ.ಅಂಬಿಗೇರ, ಗ್ರಾಮಲೆಕ್ಕಿಗರಾದ ನಧಾಪ್, ಈರಣ್ಣ ನಾಡಗೌಡ, ಲಕ್ಷ್ಮಣ ರಬ್ಲರ, ಶಿವಪ್ಪ ಚಲವಾದಿ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿ ಡಾ.ರಂಗನಾಥ ಅವರೊಂದಿಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು.

ತುರ್ತು ಆಸರೆ ಭರವಸೆ: ಮನೆ ಕುಸಿದು ಬೀದಿ ಪಾಲಾದ ಕುಟುಂಬಕ್ಕೆ ಸ್ಪಂದಿಸಿದ ಅಧಿಕಾರಿಗಳು ಅಡುಗೆ ಸಾಮಾಗ್ರಿಗಳು ಸೇರಿದಂತೆ ಜೀವನೋಪಾಯಕ ವಸ್ತುಗಳು, ತಾತ್ಕಾಲಿಕ ವಾಸಿಸಲು ಮನೆ, ಮನೆ ನಿರ್ಮಾಣಕ್ಕೆ ಎಂಜಿನಿಯರ್ ಪ್ರಸ್ತಾವನೆಯ ಮೊತ್ತದ ಪರಿಹಾರ ನೀಡುವ ಭರವಸೆ ನೀಡಿದರು.

ಪೋಟೋ15ಎನ್‌ಎಲ್ಟಿಡಿ1 ಮಣ್ಣಿನಡಿ ಸಿಲುಕಿದ ಕುಟುಂವನ್ನು ಹೊರ ತಗೆಯುತ್ತಿರುವ ಪಕ್ಕದವರು.
ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರ ಆರೋಗ್ಯ ವಿಚಾರಿಸಿದ ತಾ.ಪಂ ಇಒ ವೆಂಕಟೇಶ ವಂದಾಲ
 ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರ ಆರೋಗ್ಯ ವಿಚಾರಿಸಿದ ತಾ.ಪಂ ಇಒ ವೆಂಕಟೇಶ ವಂದಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.