ADVERTISEMENT

ಸಿಂದಗಿ| 196 ಕುಟುಂಬಗಳಿಗೂ ಮನೆಗಳ ಹಂಚಿಕೆಗೆ ಪ್ರಾಮಾಣಿಕ ಪ್ರಯತ್ನ: ಅಶೋಕ ಮನಗೂಳಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:59 IST
Last Updated 25 ಜನವರಿ 2026, 5:59 IST
ಸಿಂದಗಿ ಪಟ್ಟಣದ ವಿದ್ಯಾನಗರದ ಕೊಳಗೇರಿ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ 104 ಮನೆಗಳ ಹಂಚಿಕೆ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಶನಿವಾರ ಉದ್ಘಾಟಿಸಿದರು
ಸಿಂದಗಿ ಪಟ್ಟಣದ ವಿದ್ಯಾನಗರದ ಕೊಳಗೇರಿ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ 104 ಮನೆಗಳ ಹಂಚಿಕೆ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಶನಿವಾರ ಉದ್ಘಾಟಿಸಿದರು   

ಸಿಂದಗಿ: ‘ಸ್ವಂತದ ಸೂರು ಹೊಂದಬೇಕೆಂಬ ಕೊಳೆಗೇರಿ ನಿವಾಸಿಗಳ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಸದ್ಯ 104 ಮನೆಗಳ ಹಂಚಿಕೆ ಮಾಡಲಾಗಿದೆ. ಇನ್ನುಳಿದ 196 ಕುಟುಂಬಗಳಿಗೂ ಮನೆಗಳ ಹಂಚಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಪಟ್ಟಣದ ವಿದ್ಯಾನಗರ ಕೊಳಗೇರಿ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿ ವಿಶೇಷ ಅನುದಾನದಡಿ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ 104 ಮನೆಗಳ ಹಂಚಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘2019ರಲ್ಲಿ ಮತಕ್ಷೇತ್ರದ ಶಾಸಕರು, ಸಚಿವರೂ ಆಗಿದ್ದ ಎಂ.ಸಿ.ಮನಗೂಳಿ ಅವರ ಪ್ರಯತ್ನದ ಫಲವಾಗಿ ₹37 ಕೋಟಿ ವೆಚ್ಚದ 500 ಕೊಳೆಗೇರಿ ಮನೆಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ ನಂತರದಲ್ಲಿ 250 ಮನೆಗಳನ್ನು ಕಡಿತಗೊಳಿಸಲಾಯಿತು. 146 ಮನೆಗಳೊಂದಿಗೆ ಹೆಚ್ಚುವರಿ 50 ಮನೆಗಳು ಸೇರಿ 196 ಕುಟುಂಬಗಳಿಗೂ ನಿವೇಶನ, ಮನೆ ಕಟ್ಟಿಸಿಕೊಡುವುದು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದರು.

ADVERTISEMENT

‘ಈಗ ಹಂಚಿಕೆ ಮಾಡಬೇಕಿರುವ 104 ಮನೆಗಳನ್ನು ನಂತರದಲ್ಲಿ ಲಕ್ಕಿ ಡ್ರಾ ಮುಖಾಂತರ ಯಾವ ಮನೆ ನಂಬರ್ ಯಾರಿಗೆ ಎಂಬುದನ್ನು ಗುರುತಿಸಲಾಗುವುದು. ಒಟ್ಟು 300 ಮನೆಗಳನ್ನು ಏಕಕಾಲಕ್ಕೆ ಹಂಚಿಕೆ ಮಾಡಲಾಗುವುದು’ ಎಂದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ‘ತಲಾ ಒಂದು ಮನೆಗೆ ₹6.89 ಲಕ್ಷ ವೆಚ್ಚವಾಗುತ್ತದೆ. ಇದರಲ್ಲಿ ಎಸ್.ಸಿ/ ಎಸ್.ಟಿ ಸಮುದಾಯದ ಫಲಾನುಭವಿ ₹2.70 ಲಕ್ಷ ವಂತಿಗೆ ಹಣ ಭರಣ ಮಾಡುವುದು, ಇತರೆ ಜನರು ₹3.19 ಲಕ್ಷ ವಂತಿಗೆ ಹಣ ಭರಿಸಬೇಕಿತ್ತು. ಈಗ ಸರ್ಕಾರ ಈ ನಿಯಮಾವಳಿಯನ್ನು ರದ್ದುಗೊಳಿಸಿದೆ. ವಂತಿಗೆ ಹಣವನ್ನು ಸರ್ಕಾರವೇ ಭರಿಸುತ್ತದೆ’ ಎಂದು ತಿಳಿಸಿದರು.

ಫಲಾನುಭವಿಗಳಾದ ಮಾದೇವಿ ಹೊಸಮನಿ, ಅನ್ವರಬಿ, ‘ಕಳೆದ 30 ವರ್ಷಗಳಿಂದ ಸ್ವಂತ ಸೂರು ಇಲ್ಲದೇ ಬದುಕುತ್ತಿದ್ದೆವು. ಈಗನಮ್ಮ ಕನಸು ನನಸಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರಾಗರಂಜಿನಿ ಸಂಗೀತ ಅಕಾಡೆಮಿಯ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅಧ್ಯಾಪಕ ಸಿದ್ಧಲಿಂಗ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು.

ತಹಶೀಲ್ದಾರ್‌ ಕರೆಪ್ಪ ಬೆಳ್ಳಿ, ನಗರಸಭೆ ಪೌರಾಯುಕ್ತ ಎಸ್.ರಾಜಶೇಖರ, ಆಶ್ರಯ ಸಮಿತಿ ಸದಸ್ಯರಾದ ಭೀಮೂ ರೋಡಗಿ, ರಾಜು ಖೇಡ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಗುತ್ತಿಗೆದಾರರಾದ ಬಸನಗೌಡ ಸೌಧಿ, ಅಬ್ದುಲ್ ರಜಾಕ ಬಾಗವಾನ ಹಾಗೂ ಸತೀಶಗೌಡ ಬಿರಾದಾರ ಇದ್ದರು.

ಸಿಂದಗಿ ವಿದ್ಯಾನಗರ ಕೊಳಗೇರಿಯಲ್ಲಿ ನಿರ್ಮಾಣಗೊಂಡ ಮನೆಗಳು
ಪಟ್ಟಣದ 23 ವಾರ್ಡ್‌ಗಳಲ್ಲಿ ಒಂಬತ್ತು ಪ್ರದೇಶಗಳನ್ನು ಕೊಳೆಗೇರಿ ಎಂದು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ. 104 ಮನೆಗಳ ಪ್ರದೇಶದಲ್ಲಿ ಗುಡಿ ಮಸೀದಿ ಶಾಲೆಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ
ಅಶೋಕ ಮನಗೂಳಿ, ಶಾಸಕ

ಇಲ್ಲಗಳ ಮಧ್ಯೆ ತರಾತುರಿಯಲ್ಲಿ ಮನೆಗಳ ಹಂಚಿಕೆ

ವಿದ್ಯಾನಗರ ಕೊಳಗೇರಿ ಪ್ರದೇಶದಲ್ಲಿ 104 ಮನೆಗಳ ಹಂಚಿಕೆ ಸಮಾರಂಭ ಉದ್ಘಾಟನೆಗೊಂಡಿತು. ಆದರೆ ಹಕ್ಕುಪತ್ರ ವಿತರಣೆಯಾಗಲಿಲ್ಲ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಮನೆ ಮನೆಗೆ ನೀರಿನ ವ್ಯವಸ್ಥೆ ಇಲ್ಲ ಮನೆಗಳ ಮೇಲೆ ನೀರು ಸಂಗ್ರಹದ ಸಿಂಟೆಕ್ಸ್ ಇಲ್ಲ ಮನೆಗೊಂದು ಶೌಚಾಲಯವಿದ್ದರೂ ಒಳಚರಂಡಿ ಇಲ್ಲ ಚರಂಡಿಯೂ ಇಲ್ಲ. ಹೀಗೆ ಇಲ್ಲಗಳ ಮಧ್ಯೆ ತರಾತುರಿಯಲ್ಲಿ ಮನೆಗಳ ಹಂಚಿಕೆ ಮಾಡಿರುವ ಉದ್ದೇಶವಾದರೂ ಏನು ಎಂದು ಸಾರ್ವಜನಿಕರಿಂದ ಮಾತುಗಳು ಕೇಳಿ ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.