ADVERTISEMENT

ಸಿದ್ದರಾಮಯ್ಯ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ: ಬಸವಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:18 IST
Last Updated 13 ಜನವರಿ 2026, 4:18 IST
<div class="paragraphs"><p>ಬಸವಜಯ ಮೃತ್ಯುಂಜಯ ಸ್ವಾಮೀಜಿ</p></div>

ಬಸವಜಯ ಮೃತ್ಯುಂಜಯ ಸ್ವಾಮೀಜಿ

   

ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹೋರಾಟಕ್ಕೆ ಮನ್ನಣೆ ನೀಡದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ಸಂಕಲ್ಪ ಮಾಡಿದ್ದೇನೆ ಎಂದರು.

ADVERTISEMENT

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ರಾಣಿ ಚೆನ್ನಮ್ಮ ಅವರ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿತ್ತು, ಸಮಾರಂಭಕ್ಕೆ ಆಗಮಿಸುವಂತೆ ಸಾಕಷ್ಟು ಒತ್ತಡ ಸಹ ಇತ್ತು, ಆದರೂ ಸಹ ಸಮಾಜದ ಸಂಕಲ್ಪದಂತೆ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದರು.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದ ಕಾರಣಕ್ಕೆ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ವೇದಿಕೆ ಹಂಚಿಕೊಂಡಿಲ್ಲ ಎಂದರು.

ವಿಜಯಪುರದಲ್ಲಿ ಹೊಸದಾಗಿ ಪ್ರತಿಷ್ಠಾಪಿಸಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಐದಾರು ಭಕ್ತರೊಂದಿಗೆ ಸೇರಿ ಪುಷ್ಪಾರ್ಚನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಒತ್ತಾಯದಿಂದ ದೊಡ್ಡ ಮೆರವಣಿಗೆ ಮಾಡಿದ್ದೇವೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜೆಸಿಬಿ ಅಂದರೆ ಬಹಳ ಪ್ರೀತಿ. ಹಾಗಾಗಿ ಜೆಸಿಬಿ ಮೆರವಣಿಗೆ ಮಾಡಲಾಗಿದೆ. ನೂರು ಜನ ಶಾಸಕರಿಗಿಂತ ಯತ್ನಾಳರಂತ ಬೆರಳೆಣಿಕೆ ಶಾಸಕರು ಗಟ್ಟಿಯಾಗಿರಬೇಕು ಎಂದರು.

ಜೆಸಿಬಿ ಮೂಲಕ ಪುಷ್ಪಾರ್ಚನೆ

ವಿಜಯಪುರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಲಾಗಿರುವ ವೀರರಾಣಿ ಚೆನ್ನಮ್ಮ  ಪ್ರತಿಮೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ,ಶಾಸಕ ರಾಜುಗೌಡ ಪಾಟೀಲವರು ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿದರು.

ಪುಷ್ಪಾರ್ಚನೆಗೂ ಮುನ್ನ ಭವ್ಯ ಮೆರವಣಿಗೆ ನಡೆಯಿತು. ಸಾವಿರಾರು ಯುವಕರು ಕೇಸರಿ ವರ್ಣದ ಶಲ್ಯ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.