ನಾಲತವಾಡ: ವಸತಿ ಇಲಾಖೆ ರದ್ದು ಪಡಿಸಿದ ಮನೆಗಳಿಗೆ ಮತ್ತೆ ಕಾನೂನು ಬಾಹಿರವಾಗಿ ಜಿಪಿಎಸ್ ಮಾಡಿ ಹಣ ಪಾವತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆಪಾದನೆಯ ಮೇಲೆ ನಿವೃತ್ತ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯ ಮಹೇಶ್ ಹೇರಲಗಿ ಅವರ ನಿವೃತ್ತಿ ವೇತನದಲ್ಲಿ ಶೇಕಡಾ 10 ರಷ್ಟು ಹಣವನ್ನು 3 ವರ್ಷಗಳ ವರೆಗೆ ತುಂಬಿಸಿಕೊಳ್ಳಲು ಲೋಕಾಯುಕ್ತರು ಆದೇಶಿಸಿದ್ದಾರೆ.
2018-2019 ರಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಯಡಿ ಕಡು ಬಡವರಿಗೆ ಮಂಜೂರಾದ ಮನೆಗಳನ್ನು ಶ್ರೀಮಂತರು, ಪಟ್ಟಣ ಪಂಚಾಯಿತಿ ಸದಸ್ಯರು, ಸದಸ್ಯರ ಸಂಬಂಧಿಗಳು, ನಿವೃತ್ತ ನೌಕರರು,ಅವರ ಕುಟುಂಬಸ್ತರಿಗೆ ಮಂಜೂರು ಮಾಡಲಾಗಿರುವುದನ್ನು ಪ್ರಶ್ನಿಸಿ ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ 2019 ಜೂನ್ ನಲ್ಲಿ ಪಟ್ಟಣ ಪಂಚಾಯಿತಿಗೆ ರದ್ದುಗೊಳಿಸಲು ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸದಿದ್ದಾಗ ಫಲಾನುಭವಿಗಳ ಪಟ್ಟಿ ವಿರೋಧಿಸಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ ಪಟ್ಟಣ ಪಂಚಾಯಿತಿ ವಿರುದ್ಧ ,ನೈಜ ಬಡ ಫಲಾನುಭವಿಗಳು ಸಲ್ಲಿಸಿದ ಅರ್ಜಿ ಹಿಡಿದು ಸಾಮಾನ್ಯ ಜನರೊಂದಿಗೆ ಸೇರಿ ಸೆಪ್ಟೆಂಬರ್‌ನಿಂದ ಶಿವಾನಂದ ನಿರಂತರ ಹೋರಾಟ ಮುಂದುವರೆಸಿದ್ದರು. ಅದರ ಫಲವಾಗಿ ಕೆಲವು ಉಳ್ಳವರ ಮನೆಗಳನ್ನು ರದ್ದು ಮಾಡಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಿಖಿತವಾಗಿ ಬರೆದು ಕೊಟ್ಟಿದ್ದರು.
ಲಿಖಿತವಾಗಿ ಬರೆದುಕೊಟ್ಟ ಬಳಿಕವೂ ಸುಮಾರು 30 ಜನರಿಗೆ ಮನೆ ಮಂಜೂರು ಮಾಡಿದ್ದಲ್ಲದೇ ಎರಡು ಕಂತುಗಳಲ್ಲಿ ಜಿಪಿಎಸ್ ಮೂಲಕ ಸರ್ಕಾರದ ಹಣ ಅವರ ಖಾತೆಗೆ ಜಮಾ ಮಾಡಿರುವುದನ್ನು ಖಂಡಿಸಿ, ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.