ADVERTISEMENT

ಹನುಮಮಾಲೆ ಧರಿಸಿದ ಇಮಾಮ್‌ ಜಾಫರ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 15:01 IST
Last Updated 2 ಡಿಸೆಂಬರ್ 2022, 15:01 IST
ಇಮಾಮ್‌ ಜಾಫರ್ ಚಪ್ಪರಬಂದ 
ಇಮಾಮ್‌ ಜಾಫರ್ ಚಪ್ಪರಬಂದ    

ಬಸವನಬಾಗೇವಾಡಿ(ವಿಜಯಪುರ ಜಿಲ್ಲೆ): ತಾಲ್ಲೂಕಿನ ನರಸಲಗಿ ಗ್ರಾಮದ ಇಮಾಮ್‌ ಜಾಫರ್ ಚಪ್ಪರಬಂದ್ (ಜಾಫರ್ ಬೆಣ್ಣೆ) ಅವರು ಹನುಮ ಮಾಲೆ ಹಾಕುವ ಮೂಲಕ ಧರ್ಮ ಸಹಿಷ್ಣತೆಗೆ ಸಾಕ್ಷಿಯಾಗಿದ್ದಾರೆ.

ಇವರ ಕುಟುಂಬದ ಹಿರಿಯರು ಹಾಗೂ ಸದಸ್ಯರು ಮೊದಲಿನಿಂದಲು ಹನುಮಂತನ ಭಕ್ತರಾಗಿದ್ದರು. ಕುಟುಂಬದ ಹಿರಿಯರ ಪ್ರೇರಣೆಯಿಂದ ಮೊದಲಿನಿಂದಲೂ ದೈವಭಕ್ತರಾಗಿದ್ದ ಇಮಾಮ್‌ ಜಾಫರ್ ಅವರು 1994ರಲ್ಲಿ 48 ದಿನಗಳ ವರೆಗೆ ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದರು. ಶಬರಿಮಲೆಗೆ ಹೋಗಿ ದೇವರ ದರ್ಶನ ಪಡೆದು ಬಂದಿದ್ದಾರೆ.

‘ನಾನು ಈ ವರ್ಷ ಸ್ವ ಇಚ್ಚೆಯಿಂದ ಐದು ದಿನಗಳ ವರೆಗೆ ಹನುಮ ಮಾಲೆ ಹಾಕಿಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಹನುಮ ಮಾಲೆ ಹಾಕಿಕೊಂಡಿದ್ದೇನೆ. ಗ್ರಾಮದ ಹನುಮಾಲಾಧಾರಿಗಳೊಂದಿಗೆ ಉಳಿದುಕೊಂಡು ಬೆಳಿಗ್ಗೆ ತಣ್ಣಿರು ಸ್ನಾನ ಮಾಡಿದ ನಂತರ ದೇವರಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ಅವರೊಂದಿಗೆ ಸ್ವತಃ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೇನೆ. ಡಿ.5 ರಂದು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಎಲ್ಲರೊಂದಿಗೆ ನಾನು ದೇವರ ಪೂಜೆ ಸಲ್ಲಿಸಲಿದ್ದೇನೆ’ ಎಂದು ಇಮಾಮ್‌ ಜಾಫರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದುಶ್ಚಟಗಳು ಹತ್ತಿರ ಸುಳಿಯದಂತೆ, ಪಂಚೇಂದ್ರಿಯಗಳ ನಿಯಂತ್ರಣಕ್ಕಾಗಿ ಕಾಯಾ, ವಾಚಾ, ಮನಸ್ಸಿನಿಂದ ಹನುಮ ಮಾಲೆ ಹಾಕಿಕೊಂಡಿದ್ದೇನೆ. ನಾನು ಹನುಮ ಮಾಲೆ ಹಾಕಿಕೊಂಡಿರುವುದಕ್ಕೆ ನನ್ನ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದರು.

‘ನನಗೆ ಮಾಲೆ ಹಾಕಿದ ನಂತರ ಶಾಂತಿ, ನೆಮ್ಮದಿ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ. ಜಗತ್ತಿನಲ್ಲಿ ಇರುವುದು ಎರಡೆ ಧರ್ಮ ಅದು ಗಂಡು, ಹೆಣ್ಣು’ ಎಂದು ಅವರು ಅಭಿಪ್ರಾಯ ಪಟ್ಟರು.

ಇಮಾಮ್‌ ಜಾಫರ್‌ ಅವರ ಚಿಕ್ಕಪ್ಪ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಹಾಜಿಮಲಾಂಗ್ ಅವರು ಪ್ರತಿ ವರ್ಷ ನರಸಲಗಿ ಗ್ರಾಮದ ಮಾರುತೇಶ್ವರ ಜಾತ್ರೆಯ ಸಂದರ್ಭದಲ್ಲಿ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಯಲಗೂರ ಕ್ಷೇತ್ರಕ್ಕೆ ಹೋಗಿ, ಮರಳಿ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಗ್ರಾಮಕ್ಕೆ ಬರುತ್ತಿದ್ದರು ಎಂದು ಗ್ರಾಮದ ದೇವೇಂದ್ರ ಗೋನಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.