ADVERTISEMENT

ಗುಡ್ಡಾಪುರ ‘ಕರ್ನಾಟಕ ಭವನ’ ಉದ್ಘಾಟನೆ ಆಗಸ್ಟ್‌ 1ರಂದು: ವಿಜುಗೌಡ ಎಸ್‌.ಪಾಟೀಲ

ದಾನಮ್ಮದೇವಿ ಭಕ್ತರ ಅನುಕೂಲಕ್ಕಾಗಿ ₹ 11 ಕೋಟಿ ಅನುದಾನದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:39 IST
Last Updated 30 ಜುಲೈ 2024, 14:39 IST
ವಿಜುಗೌಡ ಎಸ್‌.ಪಾಟೀಲ
ವಿಜುಗೌಡ ಎಸ್‌.ಪಾಟೀಲ   

ವಿಜಯಪುರ: ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸರ್ಕಾರವು ₹ 11 ಕೋಟಿ ಮೊತ್ತದಲ್ಲಿ ನಿರ್ಮಿಸಿರುವ ‘ಕರ್ನಾಟಕ ಭವನ’ದ ಉದ್ಘಾಟನೆ ಆಗಸ್ಟ್‌ 1ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಶ್ರೀ ದಾನಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ವಿಜುಗೌಡ ಎಸ್‌.ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಾನಮ್ಮ ದೇವಿ ದರ್ಶನಕ್ಕೆ ರಾಜ್ಯದಿಂದ ತೆರಳುವ ಭಕ್ತರ ಅನುಕೂಲಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಜರಾಯಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ನೀಡಿದ ವಿಶೇಷ ಅನುದಾನ ಮತ್ತು ಕಾಳಜಿಯಿಂದ ಕರ್ನಾಟಕ ಭವನ ಸುಸಜ್ಜಿತವಾಗಿ ನಿರ್ಮಾಣವಾಗಿದೆ ಎಂದು ಹೇಳಿದರು.

ನೂತನ ಕರ್ನಾಟಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಜತ್ತ ಶಾಸಕ ವಿಕ್ರಮಸಿಂಹ ಸಾವಂತ ಹಾಗೂ ವಿಜಯಪುರ, ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ದುಧನಿ ಜಡೆ ಶಾಂತಲಿಂಗೇಶ್ವರ ಸ್ವಾಮೀಜಿ, ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿ, ಗೌರಿಗದ್ದೆಯ ಶ್ರೀ ದತ್ತ ಆಶ್ರಮದ ವಿನಯ ಗುರೂಜಿ, ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರು, ಗುಡ್ಡಾಪುರದ ಗುರುಪಾದ ಶಿವಾಚಾರ್ಯ ಹಿರೇಮಠ, ಗೌಡಗಾಂವದ ಜಯಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗೆ ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬಜೆಟ್‌ನಲ್ಲಿ ₹11 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಅನುದಾನದಲ್ಲಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ವಿನಿಯೋಗಿಸಲಾಗುವುದು. ದೇವಸ್ಥಾನದ ನವೀಕರಣಕ್ಕೆ ಸುಮಾರು ₹ 60 ಕೋಟಿ ಅನುದಾನದ ಅಗತ್ಯ ಇದೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರದಿಂದ ದೇವಸ್ಥಾನಕ್ಕೆ ಯಾವುದೇ ಅನುದಾನ ಇದುವರೆಗೂ ಸಿಕ್ಕಿಲ್ಲ. ಒಮ್ಮೆ ₹ 1 ಕೋಟಿ ಅನುದಾನವನ್ನು ನೀರಿನ ವ್ಯವಸ್ಥೆಗೆ ನೀಡಿದ್ದಾರೆ. ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ತಿಳಿಸಿದರು.

ದೇವಸ್ಥಾನದಲ್ಲಿ ಸಲಹಾ ಪೆಟ್ಟಿಗೆ ಇಡಲಾಗಿದ್ದು, ಭಕ್ತರು ತಮ್ಮ ಸಲಹೆಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಬಹುದು ಎಂದು ಹೇಳಿದರು.

ದೇವಸ್ಥಾನಕ್ಕೆ ಅಧ್ಯಕ್ಷನಾದ ಬಳಿಕ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ಕೈಗೊಂಡಿದ್ದೇನೆ. ದೇವಸ್ಥಾನಕ್ಕೆ ಭಕ್ತರು ಹೋಗಿ ಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ದಾನಮ್ಮದೇವಿ ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಖಚಾಂಚಿ ಚಂದ್ರಶೇಖರ ಇಂಡಿ, ನಿರ್ದೇಶಕರಾದ ಸದಾಶಿವ ಗುಡ್ಡೋಡಗಿ, ಸಿದ್ದಯ್ಯ ಹಿರೇಮಠ. ಪ್ರಕಾಶ ಗಣಿ, ಶಂಭುಲಿಂಗ ಮಮದಾಪುರ, ಗಜೇಂದ್ರ ಕಲ್ಲೊಳಿ, ಸಾಗರ ಚಂಪಣ್ಣವರ, ದಾನಮ್ಮ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುಕ್ಷೇತ್ರ ಗುಡ್ಡಾಪುರದ ದಾನಮ್ಮದೇವಿ ದೇವಸ್ಥಾನವನ್ನು ರಾಜಕೀಯ ಮುಕ್ತವಾಗಿ ಇಡಲಾಗುವುದು. ಭಕ್ತರಿಗೆ ಅಗತ್ಯ ಇರುವ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು
ವಿಜುಗೌಡ ಎಸ್‌. ಪಾಟೀಲ ಅಧ್ಯಕ್ಷ ದಾನಮ್ಮ ದೇವಸ್ಥಾನ ಕಮಿಟಿ ಗುಡ್ಡಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.