ಇಂಡಿ: ಭೌಗೋಳಿಕ ಮಾನ್ಯತೆ ಲಭಿಸಿದ ಬಳಿಕ ಇಂಡಿ ನಿಂಬೆಗೆ ದೇಶ, ವಿದೇಶಗಳಲ್ಲೂ ಬೇಡಿಕೆ ಹೆಚ್ಚಿದೆ.
ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಯುವ ರೈತರೊಬ್ಬರು ಇಂಡಿ ಲಿಂಬೆಯನ್ನು ಇತ್ತೀಚೆಗೆ ಯುಎಇ ಸೇರಿದಂತೆ ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಇಂಡಿ ಲಿಂಬೆ ಪ್ರಥಮ ಬಾರಿಗೆ ರಫ್ತಾಗಿದೆ.
ಅಫೇಡಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಚಂದ್ರಕಾಂತ ಮೇಡೆಗಾರ ಅವರು ‘ಕುಲವೇದಾ’ ಗ್ರೀನ್ಟೆಕ್ ಪ್ರೈವೆಟ್ ಲಿಮಿಟೆಡ್ ಮೂಲಕ ನೇರವಾಗಿ ಅಥರ್ಗಾ ಗ್ರಾಮದ ಗೋದಾಮಿನಲ್ಲಿ ನಿಂಬೆ ಹಣ್ಣು ಸಂಗ್ರಹಿಸಿ, ಅಲ್ಲಿಂದಲೇ ಪ್ಯಾಕ್ ಮಾಡಿ, 3 ಮೆಟ್ರಿಕ್ ಟನ್ ನಿಂಬೆಯನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಯುಎಇಗೆ ರಫ್ತು ಮಾಡಿದ್ದಾರೆ.
ಇಂಡಿ ನಿಂಬೆ ಇಂದು ಅರಬ್ ರಾಷ್ಟ್ರಗಳವರೆಗೆ ತಲುಪಿದೆ ಎಂದರೆ ಅದರ ಹಿಂದೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಶ್ರಮ ಬಹಳಷ್ಟಿದೆ.
ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತಿತರ ಪ್ರಮುಖ ನಗರಗಳಿಗೆ ಇಲ್ಲಿನ ನಿಂಬೆ ಹಣ್ಣು ಹೋಗುತ್ತಿತ್ತು. ಇಂದು ಐರೋಪ್ಯ ರಾಷ್ಟ್ರಗಳಿಗೂ ರಫ್ತಾಗುತ್ತಿದೆ.
ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗಿದ್ದು ಅಲ್ಲದೆ, ಉತ್ತಮ ಬೆಲೆಯೂ ದೊರೆತಿದೆ. ಈ ಹಿಂದೆ ಪ್ರತಿವರ್ಷ ₹350 ರಿಂದ ₹500 ಕೋಟಿ ವರೆಗೆ ವಹಿವಾಟು ನಡೆಯುತ್ತಿದ್ದ ನಿಂಬೆ ಇಂದು ₹ 600 ರಿಂದ ₹ 800 ಕೋಟಿ ವಹಿವಾಟು ನಡೆಯುತ್ತಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಲೆಕ್ಕ ನೀಡಿದೆ.
ನಿಂಬೆ ಹಣ್ಣಿನ ಜೊತೆಗೆ ಇದೀಗ ಇಂಡಿ ತಾಲ್ಲೂಕಿನಲ್ಲಿ ರೈತರು ಬೆಳೆಯುತ್ತಿರುವ ನಿಂಬೆ ಸಸಿಗಳಿಗೂ ಕೂಡಾ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೊರ ರಾಜ್ಯಗಳಿಂದ ರೈತರು ಇಂಡಿ ತಾಲ್ಲೂಕಿನ ರೈತರ ನಿಂಬೆ ಸಸಿಗಳನ್ನು ಕೊಳ್ಳುತ್ತಿದ್ದಾರೆ. ಒಂದು ಗಿಡಕ್ಕೆ ₹20 ಇದ್ದ ದರ ಇದೀಗ ₹100 ವರೆಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.